ಮಂಗಳೂರು, ಅ. 10: ಪ್ರತಿಯೊಬ್ಬರಲ್ಲೂ ಅದಮ್ಯ ಶಕ್ತಿಯಿದೆ. ಅದರ ಅರಿವು ಇರಬೇಕಷ್ಟೆ. ನಮ್ಮೊಳಗಿನ ಶಕ್ತಿಯ ಅರಿವು ನಮಗಿದ್ದರೆ ಸಾಧನೆಗೆ ನೂರು ದಾರಿಗಳಿವೆ. ಕಾರಂತರಿಗೆ ಅವರ ಶಕ್ತಿಯ ಅರಿವಿತ್ತು. ಹಾಗಾಗಿ ಹತ್ತಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದರು. ಅವರು ಪ್ರತಿ ಘಟನೆಗಳನ್ನು ದರ್ಶಿಸಿ ಪರಾಮರ್ಶಿಸುತ್ತಿದ್ದರು. ಕಾರಂತರು ಕಾದಂಬರಿಕಾರರು, ಕಲಾವಿದರು, ನಿರ್ದೇಶಕರು, ಸಂಶೋಧಕರು, ವಿಮರ್ಶಕರು ಮತ್ತು ಜೀವನಪ್ರೇಮಿ ಎಂದು ಡಾ. ಮೀನಾಕ್ಷಿ ರಾಮಚಂದ್ರ ಹೇಳಿದರು. ಅವರು ಡಾ. ಪಿ. ದಯಾನಂದ ಪೈ, ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ ಮಂಗಳೂರು ಇಲ್ಲಿ ನಡೆದ ಡಾ. ಶಿವರಾಮ ಕಾರಂತರ ನೂರಿಪ್ಪತ್ತೆರಡನೆಯ ಹುಟ್ಟುಹಬ್ಬದ ಆಚರಣೆ ಸಂದರ್ಭದಲ್ಲಿ ಕಾರಂತರ ಬದುಕು -ಬರಹ ಕುರಿತು ಮಾತನಾಡುತ್ತಿದ್ದರು. ಕಾರಂತರದು ಎಂದಿಗೂ ಸೋಲೊಪ್ಪದ ವ್ಯಕ್ತಿತ್ವ. ವಿದೇಶಿಗರೂ ಯಕ್ಷಗಾನವನ್ನು ಒಪ್ಪಿಕೊಳ್ಳಬೇಕೆಂಬ ಛಲದಿಂದ ಯಕ್ಷಗಾನ ಬ್ಯಾಲೆಯನ್ನು ಆಯೋಜಿಸಿದ್ದರು. ಮಕ್ಕಳಿಗಾಗಿ ಮಕ್ಕಳ ಪ್ರಪಂಚವನ್ನು ಪರಿಚಯಿಸಿದರು. ಸೋಲು ಗೊತ್ತಿದ್ದೂ ಚುನಾವಣೆಗೆ ನಿಂತರು. ಸುತ್ತಲಿನ ಎಲ್ಲ ಕ್ರಿಯೆಗಳಿಗೆ ಸಂವೇದಿಸಬಲ್ಲ, ನಿಷ್ಟುರವಾಗಿ ಪ್ರತಿಕ್ರಿಯಿಸಬಲ್ಲ ವಿಮರ್ಶಕರು. ಹೊಸತಲೆಮಾರು ಅವರ ಬಹುಮುಖ ವ್ಯಕ್ತಿತ್ವವನ್ನು ಪರಿಚಯಿಸಿಕೊಂಡಾಗ ಮಾತ್ರ ಸಮಸ್ಯೆಗಳನ್ನು ಎದುರಿಸಬಲ್ಲ ಆತ್ಮವಿಶ್ವಾಸ ಗಳಿಸಬಲ್ಲರು ಎಂದು ಡಾ. ಮೀನಾಕ್ಷಿ ರಾಮಚಂದ್ರ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಡಾ. ಸುಧಾಕರನ್ ವಹಿಸಿದ್ದರು. ಪದವಿ ವಿಭಾಗದ ಸಂಯೋಜನಾಧಿಕಾರಿಗಳಾದ ಡಾ. ವಸಂತಿ, ಡಾ.ನಾಗವೇಣಿ ಎನ್., ಡಾ.ವಿನೋದಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಜ್ಯೋತಿಪ್ರಿಯ ಸ್ವಾಗತಿಸಿ, ಸಾಹಿತ್ಯ ಸಂಘದ ಸಂಯೋಜಕರಾದ ನಿವೇದಿತಾ ಕ್ಯಾರೋಲಿನ ವಂದಿಸಿದರು. ವಿದ್ಯಾರ್ಥಿಗಳಾದ ಅಜಿತಶ್ರೀ ಪ್ರಾರ್ಥಿಸಿ, ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿದರು. ಕಾರಂತರ ಜನುಮದಿನದ ಪ್ರಯುಕ್ತ ಕಾರಂತ ಕೃತಿಗಳ ಪ್ರದರ್ಶನವನ್ನು ಗ್ರಂಥಾಲಯದಲ್ಲಿ ಏರ್ಪಡಿಸಲಾಗಿತ್ತು.