ಮಂಗಳೂರು, ಆ. 22: ಡಾ. ಪಿ. ದಯಾನಂದ ಪೈ -ಪಿ. ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಮಂಗಳೂರು ಹಾಗೂ ದಕ್ಷಿಣ ಕನ್ನಡ- ಉಡುಪಿ-ಕೊಡಗು ಜಿಲ್ಲಾ ಗ್ರಂಥಾಲಯಗಳ ಸಂಘ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಹಾಗೂ ರಾಜ್ಯಮಟ್ಟದ ಕಾರ್ಯಾಗಾರ ನಡೆಯಿತು. ಕೆನರಾ ಪದವಿಪೂರ್ವ ಕಾಲೇಜಿನ ಹಿರಿಯ ಕನ್ನಡ ಉಪನ್ಯಾಸಕರು, ಲೇಖಕರೂ ಆಗಿರುವ ರಘು ಇಡ್ಕಿದು ಉದ್ಘಾಟಿಸಿದರು. ಪ್ರಾಂಶುಪಾಲರಾದ ಡಾ. ಜಯಕರ ಭಂಡಾರಿ ಎಂ ಅಧ್ಯಕ್ಷತೆ ವಹಿಸಿದ್ದರು. ಸಂಘದ ಅಧ್ಯಕ್ಷರಾದ ಡಾ. ವಾಸಪ್ಪ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಗ್ರಂಥಾಲಯ ವಿಭಾಗ ಮತ್ತು ಮಾಹಿತಿ ವಿಜ್ಞಾನದ ಅಧ್ಯಕ್ಷರಾದ ಡಾ. ಉಮೇಶ್ ನಾಯಕ್ ಗ್ರಂಥಾಲಯ ವೃತ್ತಿಪರರಿಗಾಗಿ ತೆರೆದ ಸಾಫ್ಟ್ ವೇರ್ ಪರಿಕರಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಬಳಿಕ ಮಾತನಾಡಿದ ಅವರು, ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು, ಆದರೆ ಕನಸಿಲ್ಲದ ದಾರಿಯಲ್ಲಿ ನಡೆಯುವುದು ಬಲು ಕಷ್ಟ. ಕನಸನ್ನು ನನಸು ಮಾಡುವುದು ಪುಸ್ತಕಗಳು ಎಂದು ತಿಳಿಸುವುದರ ಮೂಲಕ ಗ್ರಂಥಪಾಲಕರನ್ನು ಗೌರವಿಸುವುದು ನಮ್ಮ ಆದ್ಯ ಕರ್ತವ್ಯ ಎಂದರು.
2022-23 ನೇ ಸಾಲಿನಲ್ಲಿ ನಿವೃತ್ತಿ ಹೊಂದಿದ ಗ್ರಂಥಪಾಲಕರಿಗೆ ಸನ್ಮಾನಿಸಲಾಯಿತು. ಸುನಿತಾ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜು ಸುಬ್ರಮಣ್ಯ, ಶಂಕರ್ ನಾರಾಯಣ ಭಟ್ ಕೇಂದ್ರೀಯ ವಿದ್ಯಾಲಯ ಸಂಘಟನ್, ರಾಮಚಂದ್ರ ಸರಕಾರಿ ಪ್ರಥಮ ದರ್ಜೆ ಕಾಲೇಜು, ಪುತ್ತೂರು. ಜಾನಪದ ವಿಶ್ವವಿದ್ಯಾನಿಲಯ ಹಾವೇರಿ ಇಲ್ಲಿಗೆ ಮುಖ್ಯಗ್ರಂಥಪಾಲಕರಾಗಿ ಆಯ್ಕೆಯಾದ ಸಂಘದ ನಿಕಟಪೂರ್ವ ಕಾರ್ಯದರ್ಶಿ ಡಾ. ರಾಜಶೇಖರ ಕುಂಬಾರ್ ಮತ್ತು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ರೇಂಕ್ ಪಡೆದ ರೇಣುಕಾ ಇವರನ್ನು ಸನ್ಮಾನಿಸಲಾಯಿತು.
ಸಂಘದ ನ್ಯೂಸ್ ಬುಲೆಟಿನ್ ಬಿಡುಗಡೆಗೊಳಿಸಲಾಯಿತು. ಬುಲೆಟಿನ್ ಎಡಿಟರ್ ಹಾಗೂ ಸಂಘದ ಸಾರ್ವಜನಿಕ ಸಂಪರ್ಕ ಆಧಿಕಾರಿ ಡಾ. ವನಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ರಾಮ ಕೆ., ಕಾರ್ಯಕ್ರಮದ ಸಂಯೋಜಕರಾದ ಕಾಲೇಜಿನ ಗ್ರಂಥಪಾಲಕಿ ಉಮಾ ಎ ಬಿ., ಜತೆ ಕಾರ್ಯದರ್ಶಿ ಅನಿಲ್ ಕುಮಾರ್ ಉಪಸ್ಥಿತರಿದ್ದರು. ಭವ್ಯ ಶೆಟ್ಟಿ ಪ್ರಾರ್ಥಿಸಿದರು. ಡಾ. ರವಿಚಂದ್ರ ನಾಯ್ಕ್ ವಂದಿಸಿದರು. ಸಂಘದ ಉಪಾಧ್ಯಕ್ಷೆ ಡಾ. ರೇಖಾ ಡಿ ಪೈ ಕಾರ್ಯಕ್ರಮ ನಿರೂಪಿಸಿದರು.