ಮೂಡುಬಿದಿರೆ, ಆ. 10: ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ಹಾಗೂ ಕರ್ನಾಟಕ ರಾಜ್ಯ ಔಷಧೀಯ ಸಸ್ಯಗಳ ಪ್ರಾಧಿಕಾರ ಸಹಯೋಗದಲ್ಲಿ ಕಲ್ಲಬೆಟ್ಟು ಮೊರಾರ್ಜಿ ದೇಸಾಯಿ ವಸತಿ ಪ್ರೌಢಶಾಲೆ ಆವರಣದಲ್ಲಿ ಗುರುವಾರ ‘ಶಾಲಾ ಔಷಧಿ ವನ’ವನ್ನು ಸಸ್ಯಗಳ ನಾಟಿ ಮೂಲಕ ಉದ್ಘಾಟಿಸಲಾಯಿತು. ಪುರಸಭಾ ಸದಸ್ಯ ಜೊಸ್ಸಿ ಮಿನೇಜಸ್ ಹಾಗೂ ಸುರೇಶ್ ಕೋಟ್ಯಾನ್ ಸಸಿ ನೆಡುವ ಮೂಲಕ ಉದ್ಘಾಟಿಸಿದರು. ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ದ್ರವ್ಯಗುಣ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಸುಬ್ರಹ್ಮಣ್ಯ ಪದ್ಯಾಣ ಮಾತನಾಡಿ, ಔಷಧೀಯ ಸಸ್ಯಗಳ ಮಹತ್ವವನ್ನು ತಿಳಿಸಿದರು.
ಮೊರಾರ್ಜಿ ದೇಸಾಯಿ ವಸತಿ ಪ್ರೌಢಶಾಲಾ ಪ್ರಾಂಶುಪಾಲ ಸಂಗಯ್ಯ ಬಸಯ್ಯ ಹಿರೇಮಠ ದೈನಂದಿನ ಜೀವನದಲ್ಲಿ ಸಸ್ಯದ ಬಳಕೆ ಕುರಿತು ಮಾಹಿತಿ ನೀಡಿದರು. ಉಪನ್ಯಾಸಕರು, ವಿದ್ಯಾರ್ಥಿಗಳು ಸೇರಿದಂತೆ್ ಪಾಲ್ಗೊಂಡವರು ಬಿಲ್ವಪತ್ರೆ, ಕದಿರ, ಅಶ್ವತ್ಥ, ಚಂದನ, ರಕ್ತಚಂದನ ಶಾಂತಿ ನೆಲ್ಲಿ ಸೇರಿದಂತೆ ಸುಮಾರು 120 ಪ್ರಭೇದಗಳ 250 ಸಸಿ ನೆಟ್ಟರು. ವಿದ್ಯಾರ್ಥಿಗಳು ಮುಂದಿನ ಐದು ವರ್ಷಗಳವರೆಗೆ ಈ ಸಸ್ಯಗಳ ಪಾಲನೆ ಮಾಡಲಿದ್ದಾರೆ. ಡಾ. ಕ್ಷಮಾ ಜೈನ್ ಕಾರ್ಯಕ್ರಮ ನಿರೂಪಿಸಿದರು. ಡಾ. ಲಕ್ಷ್ಮೀ ಪೈ ವಂದಿಸಿದರು. ಬಳಿಕ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು.