ಮಂಗಳೂರು, ಜು. 17: ಸದ್ಯ ಚೀನಾ ಏಷ್ಯಾ ಖಂಡದ ದೈತ್ಯ ಶಕ್ತಿಯಾಗಿದೆ. ಭಾರತ ಏಷ್ಯಾದ ದೈತ್ಯ ರಾಷ್ಟ್ರವಾಗಿ ಬೆಳೆಯುವುದೇ ಪ್ರಧಾನಿ ಮೋದಿಯವರ ಮುಂದಿನ ಗುರಿಯಾಗಿದೆ. ಅದಕ್ಕಾಗಿ ಮೋದಿಯವರನ್ನು 2024 ರ ಚುನಾವಣೆಯಲ್ಲಿ ಮತ್ತೆ ಪ್ರಧಾನಿಯಾಗಿಸುವ ಸಂಕಲ್ಪವನ್ನು ನಾವೆಲ್ಲರೂ ಮಾಡಬೇಕಿದೆ ಎಂದು ನಮೋ ಬ್ರಿಗೇಡ್ ಮುಖಂಡರಾದ ಚಕ್ರವರ್ತಿ ಸೂಲಿಬೆಲೆ ಹೇಳಿದರು. ಅವರು ಮಂಗಳೂರಿನ ಡೊಂಗರಕೇರಿಯ ಭುವನೇಂದ್ರ ಸಭಾಂಗಣದಲ್ಲಿ ತಮ್ಮ ನೂತನ ಕೃತಿ ‘ಮೋದಿ ಫಾರಿನ್ ಟ್ರಿಪ್ಪು’ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಮೋದಿಯವರ ವಿದೇಶಾಂಗ ನೀತಿಯನ್ನು ಮಹಾಭಾರತದ ದೃಷ್ಣಾಂತಗಳೊಂದಿಗೆ ಅವರು ಹಂತಹಂತವಾಗಿ ವಿವರಿಸುತ್ತಾ ಹೋದರು. ನಮ್ಮ ರಾಜಕೀಯ ಸಂಸ್ಕೃತಿ ಹಿಂಸೆಯ ಮಾರ್ಗದಲ್ಲಿ ನಡೆಯುವುದಲ್ಲ. ಹಾಗಂತ ನೆಹರೂ ಕಾಲದ ರಾಜಕೀಯ ಸಂಸ್ಕೃತಿಯೂ ಅಲ್ಲ. ನಮ್ಮ ಮೇಲೆ ಕಾಲು ಕೆರೆದು ಜಗಳ ಮಾಡಿದರೆ ಅದಕ್ಕೆ ಅವರದ್ದೇ ಭಾಷೆಯಲ್ಲಿ ಪ್ರತ್ಯುತ್ತರ ನೀಡುವ ಸರಕಾರ ರಾಷ್ಟ್ರದಲ್ಲಿದೆ ಎಂದು ಅವರು ಹೇಳಿದರು. ಮೋದಿಯವರ ವಿದೇಶ ಪ್ರವಾಸದಲ್ಲಿ ಸಾವಿರಾರು ಅನಿವಾಸಿ ಭಾರತೀಯರು ಮೋದಿಯವರ ಮಾತುಗಳಿಗಾಗಿ ಕಾಯುತ್ತಾರೆ. ಅಂತರಾಷ್ಟ್ರೀಯ ಕಂಪೆನಿಗಳು ಮೋದಿಯವರೊಂದಿಗೆ ಸಭೆ ನಡೆಸಿ ಭಾರತದಲ್ಲಿ ಬಂಡವಾಳ ಹೂಡಲು ಕಾತರಿಸುತ್ತಿವೆ. ಮೋದಿಯವರು ಅಮೇರಿಕಾ ಸಂಸತ್ತಿನಲ್ಲಿ ಎರಡು ಸಲ ಭಾಷಣ ಮಾಡಿದ ಏಕೈಕ ಭಾರತೀಯ ಪ್ರಧಾನಿಯಾಗಿದ್ದಾರೆ. ಮನಮೋಹನ್ ಸಿಂಗ್ ಅವರಿಗೆ ಹೋಲಿಸಿದಾಗ ಮೋದಿಯವರು ಕಡಿಮೆ ಖರ್ಚಿನಲ್ಲಿ ಹೆಚ್ಚು ರಾಷ್ಟ್ರಗಳಿಗೆ ಭೇಟಿ ನೀಡಿ ಹೆಚ್ಚು ಒಪ್ಪಂದ ಮಾಡಿ ದೇಶಕ್ಕೆ ಲಾಭ ಮಾಡಿದ್ದಾರೆ. ಕೊರೊನಾ ಅವಧಿಯಲ್ಲಿ 150 ರಾಷ್ಟ್ರಗಳಿಗೆ ಕೊರೊನಾ ಲಸಿಕೆ, ಔಷಧಿ ಪೂರೈಸಿ ಅಸಂಖ್ಯಾತ ಜನರ ಜೀವ ಉಳಿಸಿದ್ದಾರೆ. ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ, ಆರ್ಟಿಕಲ್ 370 ರದ್ದು, ತ್ರಿವಳಿ ತಲಾಕ್ ನಿಷೇಧ ಸಹಿತ ಈಗ ಏಕರೂಪ ನಾಗರಿಕ ಸಂಹಿತೆ ತರಲು ಅಣಿಯಾಗಿದ್ದಾರೆ. ಇದರಿಂದ ಮುಸಲ್ಮಾನ ಸಮುದಾಯದ ಹೆಣ್ಣು ಮಕ್ಕಳಿಗೆ ಹೆಚ್ಚು ಪ್ರಯೋಜನವಾಗಲಿದೆ ಎಂದು ತಿಳಿಸಿದರು.
ಪುಸ್ತಕ ಬಿಡುಗಡೆ ಸಮಾರಂಭದ ಮುಖ್ಯ ಅತಿಥಿ ಬಂಗಾರಡ್ಕ ವಿಶ್ವೇಶ್ವರ ಭಟ್ ಮಾತನಾಡಿ, ಮೋದಿಯವರಿಗೆ ಜನರ ನಾಡಿಮಿಡಿತ ಗೊತ್ತಿದೆ. ಜನರ ಆಶೋತ್ತರಗಳ ಬಗ್ಗೆ ಅರಿವಿದೆ. ಆಂತರಿಕ ಭದ್ರತೆ, ವಿದೇಶಾಂಗ ನೀತಿ, ರಕ್ಷಣೆಯ ಸ್ಪಷ್ಟ ಕಲ್ಪನೆ ಇದೆ. ಹಿಂದಿನ ಪ್ರಧಾನಿಗಳ ವೈಫಲ್ಯಗಳು ಮೋದಿಯವರ ಕಾಲದಲ್ಲಿ ಪುನರಾವರ್ತನೆಯಾಗಿಲ್ಲ ಎಂದು ಹೇಳಿದರು. ನಮೋ ಬ್ರಿಗೇಡ್ 2.0 ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮದ ಮೊದಲು ಚಕ್ರವರ್ತಿ ಸೂಲಿಬೆಲೆ ಮಂಗಳೂರಿನ ನಾಗರಿಕರೊಂದಿಗೆ ಸಂಘಟನೆಯ ಪೂರ್ವಭಾವಿ ಸಭೆ ನಡೆಸಿದರು.