ವಿದ್ಯಾಗಿರಿ (ಮೂಡುಬಿದಿರೆ), ಜು. 15: ನಿರುದ್ಯೋಗಿಗಳಿಗೆ ಕೃಷಿ ಮಾಡಲು ಭೂಮಿ ನೀಡಿ ಎಂದು ಮೂಡುಬಿದಿರೆ ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಸಲಹೆ ನೀಡಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸುಂದರಿ ಆನಂದ ಆಳ್ವ ಆವರಣದಲ್ಲಿನ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಸಭಾಭವನದಲ್ಲಿ ಹಲಸು- ವೈವಿಧ್ಯಮಯ ಹಣ್ಣುಗಳ ಮಹಾಮೇಳ ಸಮಿತಿ ನೇತೃತ್ವದಲ್ಲಿ ಕೃಷಿಋಷಿ ಡಾ.ಎಲ್.ಸಿ. ಸೋನ್ಸ್ ಸ್ಮರಣಾರ್ಥ ಹಮ್ಮಿಕೊಳ್ಳಲಾದ ಹಲಸು ವೈವಿಧ್ಯಮಯ ಹಣ್ಣುಗಳು, ಆಹಾರೋತ್ಸವ ಮತ್ತು ಕೃಷಿ ಪ್ರದರ್ಶನಗಳ ಪರಿಕರಗಳ ಪ್ರದರ್ಶನ ಮತ್ತು ಮಾರಾಟ ‘ಸಮೃದ್ಧಿ’ಯನ್ನು ಮೋಹಿನಿ ಅಪ್ಪಾಜಿ ನಾಯ್ಕ್ ಸಭಾಂಗಣದಲ್ಲಿ ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ನಿರುದ್ಯೋಗಿಗಳಿಗೆ ಕೃಷಿ ತರಬೇತಿ, ಗೌರವಧನ ನೀಡಿ ಕೃಷಿ ಮಾಡಲು ಭೂಮಿಯನ್ನು ಒದಗಿಸಬೇಕು. ಅದು ದೇಶದ ಆಹಾರ ಮತ್ತು ನಿರುದ್ಯೋಗ ಸಮಸ್ಯೆಗಳಿಗೆ ಪರಿಹಾರವಾಗಲಿದೆ ಎಂದರು. ಕೋಟಿ ವಿದ್ಯೆಯಲ್ಲಿ ಮೇಟಿ ವಿದ್ಯೆಯೇ ಮೇಲು ಎಂಬ ಮಾತಿನಂತೆ ಕೃಷಿಯಿಂದಲೇ ಎಲ್ಲವೂ. ಪ್ರಕೃತಿಯಲ್ಲಿ ಸೌಂದರ್ಯ ಕೊರತೆಯಾದಾಗ ವಿಕೃತಿ ಉಂಟಾಗುತ್ತದೆ ಎಂದರು. ಹಲಸಿನ ಖಾದ್ಯಗಳು ತುಳುನಾಡಿನ ವೈಶಿಷ್ಟ್ಯಯವಾಗಿವೆ. ಜನರಿಗೆ ಊಟವೇ ಸಂಭ್ರಮವಾದರೆ, ಸಂತರಿಗೆ ಉಪವಾಸವೇ ಹಬ್ಬ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಮಾತನಾಡಿ, ನಾವು ಏನೇ ಕೆಲಸ ಮಾಡಿದರೂ, ಸಮಾಜ ಮತ್ತು ಭವಿಷ್ಯದ ದೃಷ್ಟಿಯಿದ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಸಾಮಾಜಿಕ ಪರಿಕಲ್ಪನೆಯ ‘ಸಮೃದ್ಧಿ’ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಡಾ.ಎಲ್.ಸಿ. ಸೋನ್ಸ್ ಅವರ ಹೆಸರು ಚಿರಸ್ಥಾಯಿ ಮಾಡುವುದು ನಮ್ಮೆಲ್ಲರ ಆಶಯ ಎಂದರು. ಕೃಷಿಋಷಿ ಡಾ.ಎಲ್. ಸಿ. ಸೋನ್ಸ್ ಅವರ ಪತ್ನಿ ಬೆನಿಟಾ ಸೋನ್ಸ್, ಉದ್ಯಮಿ ಕೆ. ಶ್ರೀಪತಿ ಭಟ್, ಜಂ ಟಿ ಕೃಷಿ ನಿರ್ದೇಶಕ ಕೆಂಪೇಗೌಡ, ಎಸ್‌ಕೆಡಿಆರ್‌ಡಿಪಿ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಧನಕೀರ್ತಿ ಬಲಿಪ, ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ಸಿಇಒ ಚಂದ್ರಶೇಖರ್ ಎಂ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್. ಸತೀಶ್, ಬ್ರಹ್ಮಾವರ ಕೆವಿಕೆ ಮುಖ್ಯಸ್ಥ ಡಾ.ಬಿ. ಧನಂಜಯ, ಹಿರಿಯ ಕೃಷಿ ವಿಜ್ಞಾನಿ ರವಿರಾಜ್ ಶೆಟ್ಟಿ, ಕೃಷಿ ಸಲಹಾ ಸಮಿತಿ ಸದಸ್ಯ ರಾಜವರ್ಮ ಬೈಲಂಗಡಿ, ತುಳುಕೂಟ ಅಧ್ಯಕ್ಷ ಧನಕೀರ್ತಿ ಬಲಿಪ, ಮಂಗಳೂರು ಕೆವಿಕೆ ಮಾಜಿ ಮುಖ್ಯಸ್ಥ ಸುಭಾಶ್ಚಂದ್ರ ಚೌಟ ಇದ್ದರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಕಲಾ ನಿಖಾಯದ ಡೀನ್ ವೇಣುಗೋಪಾಲ ಶೆಟ್ಟಿ ಕಾರ‍್ಯಕ್ರಮ ನಿರ್ವಹಿಸಿದರು.
‘ಸಮೃದ್ಧಿ’ಯಲ್ಲಿ ಜು.15, 16ರಂದು ವೈವಿಧ್ಯಮಯ ಕಾರ್ಯಕ್ರಮ: ಜು. 15 ಶನಿವಾರ ಬೆಳಿಗ್ಗೆ10 ಗಂಟೆಗೆ ‘ಹಣ್ಣು ಮತ್ತು ತರಕಾರಿಗಳ ಮೌಲ್ಯವರ್ಧನೆ ಮತ್ತು ಸಂರಕ್ಷಣೆ’ ಕುರಿತು ವಿಚಾರ ಸಂಕಿರಣ ನಡೆಯಲಿದ್ದು ಕೊಪ್ಪದ ಪ್ರಗತಿಪರ ಕೃಷಿ ಉತ್ಪನ್ನ ತರಬೇತುದರರಾದ ಸುಮಾ ರಂಗಪ್ಪ ಮಾಹಿತಿ ನೀಡುವರು. 11 ಗಂಟೆಗೆ ಸಖರಾಯಪಟ್ಟಣದ ಹಲಸಿನ ಹಣ್ಣಿನ ಉತ್ಪನ್ನಗಳ ತರಬೇತುದಾರ ಶಿವಣ್ಣ ಹಲಸಿನ ಹಣ್ಣಿನ ಮೌಲವರ್ಧನೆ ಹಾಗೂ ಸಂರಕ್ಷಣೆಯ ವಿಧಾನಗಳ ಕುರಿತು ಉಪನ್ಯಾಸ ನೀಡುವರು. ಜು.16 ರಂದು 10 ಗಂಟೆಗೆ ಬಂಟ್ವಾಳದ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಪ್ರದೀಪ್ ಡಿಸೋಜ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ. ಅದೇ ದಿನ ಮಧ್ಯಾಹ್ನ 3 ಗಂಟೆಗೆ ಸಮೃದ್ಧಿ ಹಲಸು ಮೇಳದ ಸಮಾರೋಪ ಸಮಾರಂಭ ಶ್ರೀಮತಿ ಮೋಹಿನಿ ಅಪ್ಪಾಜಿ ನಾಯಕ್ ಸಭಾಂಗಣದಲ್ಲಿ ನಡೆಯಲಿದ್ದು, ಶಾಸಕ ಉಮನಾಥ್ ಕೋಟ್ಯಾನ್ ಅಧ್ಯಕ್ಷತೆ ವಹಿಸುವರು. ಮಂಗಳೂರು ಕೃಷಿಕ ಸಮಾಜದ ಅಧ್ಯಕ್ಷ ಸಂಪತ್ ಸಾಮ್ರಾಜ್ಯ ಮತ್ತು ಮೂಡುಬಿದಿರೆ ರೋಟರಿ ಕ್ಲಬ್ ಅಧ್ಯಕ್ಷ ನಾಗರಾಜ್ ಬಿ. ಭಾಗವಹಿಸುವರು.