ಮಂಗಳೂರು, ಜು. 10: ಸೇವಾ ಮನೋಭಾವನೆ ಹೊಂದಿರುವ ಬಂಟ ಸಮಾಜ ಇಂದು ಎಲ್ಲ ವರ್ಗದ ಜನರ ಪ್ರೀತಿ, ವಿಶ್ವಾಸ ಗಳಿಸಿದೆ. ಸಮಾಜದ ಹಿರಿಯರು ಪಾಲಿಸಿಕೊಂಡು ಬಂದಿರುವ ಸಂಸ್ಕಾರ, ಸಂಸ್ಕೃತಿ, ಸಂಪ್ರದಾಯವನ್ನು ರಕ್ಷಿಸಿ ಮುಂದಿನ ಪೀಳಿಗೆಯಲ್ಲಿ ಅರಿವು ಮೂಡಿಸುವ ಮಹತ್ವದ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ಇಂಟರ್ ನ್ಯಾಷನಲ್ ಬಂಟ್ಸ್ ವೆಲ್‌ಫೇರ್ ಟ್ರಸ್ಟ್ ವತಿಯಿಂದ ಮರವೂರಿನಲ್ಲಿ ನಡೆದ ‘ಮರಿಯಲದ ಮಿನದನ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ತುಳುನಾಡಿನ ನಂಬಿಕೆಗಳಿಗೆ ಚ್ಯುತಿ ತರುವ ಕೆಲವು ಪ್ರಯತ್ನಗಳು ನಡೆಯುತ್ತಿದ್ದು ಅದರ ವಿರುದ್ಧ ಎಲ್ಲರೂ ಒಂದಾಗಿ ಹೋರಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಎ. ಸದಾನಂದ ಶೆಟ್ಟಿ ಮಾತನಾಡಿ, ಇಂಟರ್ ನ್ಯಾಷನಲ್ ಬಂಟ್ಸ್ ವೆಲ್‌ಫೇರ್ ಟ್ರಸ್ಟ್ ಕೇವಲ ಬಂಟ ಸಮಾಜಕ್ಕೆ ಸೀಮಿತವಾಗದೆ ಆರ್ಥಿಕವಾಗಿ ಹಿಂದುಳಿದ ಎಲ್ಲಾ ವರ್ಗದ ಜನತೆಗೆ ನೆರವಾಗುತ್ತಿದೆ ಎಂದರು. ಶಾಸಕರಾದ ರಾಜೇಶ್ ನಾಯ್ಕ್, ಡಾ. ವೈ. ಭರತ್ ಶೆಟ್ಟಿ, ಗುರುರಾಜ್ ಗಂಟಿಹೊಳೆ, ಅಶೋಕ್ ಕುಮಾರ್ ರೈ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಕೆ.ಆನಂದ ಶೆಟ್ಟಿ, ಬಿ.ರವೀಂದ್ರ ಶೆಟ್ಟಿ, ಪಿ.ಬಿ.ಹರೀಶ್ ರೈ, ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರದ ಸಾಧಕಿ ಮಾಲತಿ ಶೆಟ್ಟಿ ಮಾಣೂರು ಇವರುಗಳನ್ನು ಸನ್ಮಾನಿಸಲಾಯಿತು. ಮರಿಯಲದ ಮಿನದನ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ದ.ಕ.ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್, ಡಾ. ಭಾಸ್ಕರ ಶೆಟ್ಟಿ, ಸುಭಾಷ್‌ಚಂದ್ರ ಶೆಟ್ಟಿ, ಪಾದೆಮನೆ ಅಜಿತ್ ರೈ, ಕೊಡ್ಮಾಣ್ ರಾಮಚಂದ್ರ ಶೆಟ್ಟೆ, ಸುಧಾಕರ ಶೆಟ್ಟಿ ಸುಗ್ಗಿ, ಚಿತ್ತರಂಜನ್ ಶೆಟ್ಟಿ ಪಡು, ಟ್ರಸ್ಟ್‌ನ ಕಾರ್ಯಾಧ್ಯಕ್ಷ ದೇವಿಚರಣ್ ಶೆಟ್ಟಿ, ಬಂಟರ ಸಂಘದ ವಿವಿಧ ವಲಯಗಳ ಅಧ್ಯಕ್ಷರು ಉಪಸ್ಥಿತರಿದ್ದರು. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ರಾಜಗೋಪಾಲ್ ರೈ ಸ್ವಾಗತಿಸಿ, ಪ್ರದೀಪ್ ಆಳ್ವ ಕದ್ರಿ ವಂದಿಸಿದರು. ನಿತ್ಯಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.