ಮಂಗಳೂರು: ಹನ್ನೆರಡನೇ ಶತಮಾನದಲ್ಲಿ ಸಾಮಾಜಿಕವಾಗಿ ಸ್ಥಾಪಿತ ಜೀವವಿರೋಧಿ ಮೌಲ್ಯಗಳ ವಿರುದ್ಧ ನಡೆದ ಹೋರಾಟದಲ್ಲಿ ಮುಖ್ಯ ಪಾತ್ರ ವಹಿಸಿದವರು ಅಂಬಿಗರ ಚೌಡಯ್ಯ. ಇವರು ತನ್ನ ವೃತ್ತಿಯ ಹೆಸರನ್ನು ತನ್ನ ಹೆಸರಿನೊಂದಿಗೆ ಸೇರಿಸಿಕೊಂಡು, ವೃತ್ತಿ ಧರ್ಮವನ್ನು ಎತ್ತರಕ್ಕೆ ವಹಿಸಿದ ಸಂತ, ದಾರ್ಶನಿಕ. ತನ್ಮೂಲಕ ಸಾಮಾಜಿಕ ಸಮಾನತೆಯನ್ನು ಸಾಧಿಸ ಹೊರಟ ಮಾನವತಾವಾದಿ ಎಂದು ಪ್ರೊ. ಚಂದ್ರಕಿರಣ ಹೇಳಿದರು.
ಅವರು ಮಂಗಳೂರು ವಿಶ್ವವಿದ್ಯಾನಿಲಯದ ಅಂಬಿಗರ ಚೌಡಯ್ಯ ಅಧ್ಯಯನ ಪೀಠ, ಡಾ. ಪಿ.ದಯಾನಂದ ಪೈ- ಪಿ.ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ರಥಬೀದಿ ಕನ್ನಡ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶ ಇವರ ಜಂಟಿ ಆಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ನಡೆದ “ಅಂಬಿಗರ ಚೌಡಯ್ಯನವರ ವಚನಗಳಲ್ಲಿ ವಿಭಿನ್ನ ನೆಲೆಗಳು” ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು
ಉದ್ಘಾಟಿಸಿ ಮಾತನಾಡುತ್ತಿದ್ದರು.
ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ಸಂಯೋಜಕರಾದ ಪ್ರೊ. ಸೋಮಣ್ಣ ಅವರು ಮಾತನಾಡುತ್ತಾ, ಅಧ್ಯಯನ ಪೀಠಗಳು ವಿದ್ಯಾರ್ಥಿಗಳಿಗೆ ವಿವಿಧ ಸಾಧಕರ ಸಾಧನೆಗಳನ್ನು ಪರಿಚಯಿಸುವುದರ ಮೂಲಕ ಅಂತರಂಗ ಬಹಿರಂಗ ಸ್ವಚ್ಛತೆಯನ್ನು ಮಾಡುತ್ತದೆ. ವಿದ್ಯಾರ್ಥಿಗಳನ್ನು ರಾಷ್ಟ್ರದ ಸಂಪತ್ತಾಗಿ ಪರಿವರ್ತಿಸುವುದೇ ಈ ಪೀಠಗಳ ಮಹತ್ವದ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಯಕರ ಭಂಡಾರಿ ಎಂ ಮಾತನಾಡಿ, ಇಂದಿನ ಯುವಜನಾಂಗ ಅನುಭವಿಸುವ ತಲ್ಲಣಗಳ ಸಾವಿರಾರು ಪಟ್ಟು ತಲ್ಲಣಗಳು ನಮ್ಮ ಹಿಂದಿನ ದಾರ್ಶನಿಕರನ್ನು ಕಾಡಿದೆ. ಅಂತಹ ವ್ಯಕ್ತಿಗಳ ಬದುಕನ್ನು ಅಧ್ಯಯನ ಮಾಡಿಕೊಳ್ಳುವ ಮೂಲಕ ಯುವಜನಾಂಗ ಆತ್ಮಸ್ಥೈರ್ಯವನ್ನು ರೂಢಿಸಿಕೊಳ್ಳಬೇಕು ಎಂದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ರವಿಕುಮಾರ ಎಂ.ಪಿ ಸ್ವಾಗತಿಸಿ, ಡಾ. ನಾಗವೇಣಿ ಎನ್ ವಂದಿಸಿದರು. ಡಾ. ಜ್ಯೋತಿಪ್ರಿಯ ಕಾರ್ಯಕ್ರಮ ನಿರೂಪಿಸಿದರು. ವಿಚಾರಗೋಷ್ಠಿಯಲ್ಲಿ ಡಾ. ರತ್ನಾಕರ ಮಲ್ಲಮೂಲೆ, ಡಾ. ಮಾಧವ ಎಂ ಕೆ., ಡಾ. ನಾಗಾರ್ಜುನ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು.
ಡಾ. ಎಚ್.ಕೆ. ವೆಂಕಟೇಶ, ಡಾ. ಮಣಿ, ಡಾ. ಶಂಕರಪ್ಪ ಬಾರಿಕೇರಾ, ಡಾ. ಮಂಜುನಾಥ ಎಂ.ಎಂ ಅಂಬಿಗರ ಚೌಡಯ್ಯನವರ ವಿವಿಧ ವಿಚಾರಗಳ ಕುರಿತು ಪ್ರಬಂಧ ಮಂಡಿಸಿದರು.