ಮಂಗಳೂರು: ಶಿವಮೊಗ್ಗದಲ್ಲಿ ಹತ್ಯೆಯಾದ ಬಜರಂಗದಳದ ಕಾರ್ಯಕರ್ತ ಹರ್ಷ ಕುಟುಂಬಕ್ಕೆ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅವರು 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.
ಶಾಸಕ ವೇದವ್ಯಾಸ್ ಕಾಮತ್ ಈ ಕುರಿತು ಟ್ವೀಟ್ ಮಾಡಿ, “ಶಿವಮೊಗ್ಗದಲ್ಲಿ ಹತ್ಯೆಗೀಡಾದ ಯುವ ಹಿಂದೂ ಕಾರ್ಯಕರ್ತ ಹರ್ಷನ ಕುಟುಂಬಕ್ಕೆ ನನ್ನ ವೈಯಕ್ತಿಕ ನೆಲೆಯಿಂದ 2 ಲಕ್ಷ ರೂಪಾಯಿಗಳನ್ನು ನೀಡುತಿದ್ದೇನೆ. ಸಿದ್ಧಾಂತಕ್ಕಾಗಿ ಬಲಿದಾನಗೈದ ಹರ್ಷನ ಕುಟುಂಬದ ಜವಾಬ್ದಾರಿ ಹಿಂದೂ ಸಮಾಜದ ಮೇಲಿದೆ. ಹಾಗಾಗಿ ನಮ್ಮಿಂದಾಗುವಷ್ಟು ಸಹಾಯ ಮಾಡೋಣ. ಅವರ ಕುಟುಂಬಕ್ಕೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ” ಎಂದು ಹೇಳಿದ್ದಾರೆ.
ಹರ್ಷ ಹತ್ಯೆಯ ಹಿಂದೆ ರಾಷ್ಟ್ರ ವಿರೋಧಿ ಸಂಘಟನೆಗಳ ಕೈವಾಡವಿದೆ. ಹಾಗಾಗಿ ಈ ಹತ್ಯೆಯ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ನೀಡಿ, ದುರ್ಘಟನೆಯ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಗೃಹ ಸಚಿವರನ್ನು ಆಗ್ರಹಿಸಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.