ಉಡುಪಿ: ಕೃಷಿ ಇಲಾಖೆಯ ವತಿಯಿಂದ ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆಯನ್ನು ಪ್ರೋತ್ಸಾಹಿಸಿ, ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಹಾಗೂ ರೈತರಿಗೆ ಇಂಧನದ ವೆಚ್ಚದ ಭಾರವನ್ನು ಕಡಿಮೆ ಮಾಡುವ ಸಲುವಾಗಿ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಪ್ರತಿ ಎಕರೆಗೆ ರೂ. 250 ರಂತೆ ಗರಿಷ್ಠ 5 ಎಕರೆಯವರೆಗೆ ಡಿ.ಬಿ.ಟಿ ಮೂಲಕ ಡೀಸೆಲ್ ಸಹಾಯಧನ ನೀಡುವ ರೈತಶಕ್ತಿ ಎಂಬ ಕಾರ್ಯಕ್ರಮವನ್ನು ಜಾರಿಗೊಳಿಸಿದ್ದು, ಸದ್ರಿ ಯೋಜನೆಯಡಿ ರೈತರು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.
ರೈತರ ಹಿಡುವಳಿ ಆಧಾರದ ಮೇಲೆ ಗರಿಷ್ಠ 5 ಎಕರೆಯವರೆಗೆ ಡೀಸೆಲ್ ಸಹಾಯಧನ ಒದಗಿಸಲಿದ್ದು, ಫ್ರೂಟ್ಸ್ ಪೋರ್ಟಲ್‌ನಲ್ಲಿ ನಮೂದಿಸಿರುವ ಹಿಡುವಳಿಯ ಆಧಾರದ ಮೇಲೆ ಸಹಾಯಧನ ವರ್ಗಾವಣೆಯಾಗಲಿದೆ.
ಜಿಲ್ಲೆಯ ರೈತರು ಈ ಯೋಜನೆಯ ಪ್ರಯೋಜನ ಪಡೆಯಲು ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ, ತಮ್ಮ ಜಮೀನಿನ ಎಲ್ಲಾ ಸರ್ವೇ ನಂಬರ್‌ಗಳ ವಿಸ್ತೀರ್ಣವನ್ನು ಫ್ರೂಟ್ಸ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಬೇಕು. ಇದುವರೆಗೆ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಳ್ಳದ ರೈತರು ಕೂಡಲೇ ನೋಂದಣಿ ಮಾಡಿಸಿಕೊಳ್ಳುವಂತೆ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.