ಮಲ್ಪೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಉಡುಪಿ ಇಲ್ಲಿ ವಾಣಿಜ್ಯ ಸಹಾಯಕ ಪ್ರಾಧ್ಯಪಕರಾಗಿರುವ ಪ್ರೊ. ಉದಯ ಶೆಟ್ಟಿ ಕೆ ಯವರಿಗೆ ಕುಪ್ಪಂನ ದ್ರಾವಿಡ ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿಯನ್ನು ನೀಡಿದೆ. ಇವರು ಸೈಂಟ್ ಅಲೋಷಿಯಸ್ (ಸ್ವಾಯತ್ತ) ಕಾಲೇಜು ಮಂಗಳೂರಿನ ವಾಣಿಜ್ಯಶಾಸ್ತ್ರ ವಿಭಾಗದ ಡೀನ್ ಡಾ. ಸುರೇಶ್ ಪೂಜಾರಿಯವರ ಮಾರ್ಗದರ್ಶನದಲ್ಲಿ ‘ರೂರಲ್ ಮಾರ್ಕೆಟಿಂಗ್ ಸ್ಟ್ರಾಟಜೀಸ್ ಫಾರ್ ಲೈಪ್ ಇನ್ಶೂರೆನ್ಸ್ ಪ್ರೊಡೆಕ್ಟ್ ಎ ಸ್ಟಡಿ ಇನ್ ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್’ ಎಂಬ ವಿಷಯದಲ್ಲಿ ಸಿದ್ಧಪಡಿಸಿದ ಸಂಶೋಧನಾ ಪ್ರಬಂಧವನ್ನು ಅಂಗೀಕರಿಸಿ ವಿಶ್ವವಿದ್ಯಾನಿಲಯವು ಪಿಎಚ್‌ಡಿ ಪದವಿಯನ್ನು ನೀಡಿದೆ.
ಪ್ರಸ್ತುತ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ಪದವಿ ವಿಭಾಗದ ಮುಖ್ಯಸ್ಥರಾಗಿರುವ ಉದಯ ಶೆಟ್ಟಿ ಕೆ 20 ವರ್ಷಗಳ ಬೋಧನಾನುಭವ ಹೊಂದಿದ್ದು, ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಹಾಗೂ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ.
ಭಾರತ ಸ್ಕೌಟ್ ಗೈಡ್ಸ್ ರೋವರ್ ವಿಭಾಗದಲ್ಲಿ ಹಿಮಾಲಯ ವುಡ್‌ಬ್ಯಾಡ್ಜ್ ತರಬೇತಿ ಪಡೆದಿದ್ದು, ಯೂತ್ ರೆಡ್‌ಕ್ರಾಸ್ ಕಾರ್ಯಕ್ರಮ ಅಧಿಕಾರಿ ಹಾಗೂ ಪ್ರಥಮ ಚಿಕಿತ್ಸಾ ತರಬೇತಿದಾರರಾಗಿದ್ದಾರೆ. ಹಲವಾರು ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಇವರನ್ನು ಕಾಲೇಜಿನ ಪ್ರಾಂಶುಪಾಲ ಡಾ. ಗಣನಾಥ ಶೆಟ್ಟಿ ಎಕ್ಕಾರು ಅಭಿನಂದಿಸಿದ್ದಾರೆ.