ಬ್ರಹ್ಮಾವರ: ಹಡಿಲು ಭೂಮಿ ಕೃಷಿ ಅಂದೋಲನದಡಿ ನೀಲಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೇದಾರೋತ್ಥಾನ ಟ್ರಸ್ಟ್ ವತಿಯಿಂದ ಸುಮಾರು 19 ಎಕರೆ ಹಡಿಲು ಭೂಮಿ ಸಾವಯವ ಕೃಷಿ ಮಾಡಲಾಗುತ್ತಿದ್ದು, ನೀಲಾವರ ಕಳುವಿನಬೆಟ್ಟು ಬಳಿಯ ಹಡಿಲು ಭೂಮಿ ಕೃಷಿ ನಾಟಿ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘ ದಕ್ಷಿಣ ಮಧ್ಯ ಕ್ಷೇತ್ರಿಯ ಕಾರ್ಯಕಾರಿಣಿ ಸದಸ್ಯ ಡಾ. ಕಲ್ಲಡ್ಕ ಪ್ರಭಾಕರ್ ಭಟ್, ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ, ನೀಲಾವರ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎನ್. ರಘುರಾಮ ಮಧ್ಯಸ್ಥ, ನೀಲಾವರ ಜೆನಿತ್ ಡೈ ಮೇಕರ್ಸ್ ಪ್ರೈ. ಲಿ. ವ್ಯವಸ್ಥಾಪಕ ನಿರ್ದೇಶಕ ವಿಶ್ವನಾಥ್ ಸನಿಲ್, ಶಾಸಕ ಕೆ. ರಘುಪತಿ ಭಟ್ ಇವರೆಲ್ಲರು ಭೂಮಿಗೆ ಹಾಲನ್ನು ಅರ್ಪಿಸಿ ನೇಜಿ ನೀಡುವ ಮೂಲಕ ಯಂತ್ರ ನಾಟಿ ಕಾರ್ಯಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಡಾ. ಕಲ್ಲಡ್ಕ ಪ್ರಭಾಕರ್ ಭಟ್, ನಮ್ಮ ದೇಶದ ಸಂಸ್ಕೃತಿಯಾಗಿರುವ ಕೃಷಿಯೊಂದಿಗೆ ನಾವೆಲ್ಲರೂ ಭಾವನಾತ್ಮಕವಾದ ಸಂಬಂಧವನ್ನು ಹೊಂದಿದ್ದೇವೆ. ಮಾತೃಸ್ವರೂಪಿ ಭೂಮಿಯಲ್ಲಿ ಕೃಷಿಯನ್ನು ಹೆಚ್ಚೆಚ್ಚು ಮಾಡುವ ಮೂಲಕ ಈ ನೆಲದ ಸಂಸ್ಕೃತಿಯನ್ನು ಉಳಿಸಬೇಕಾಗಿದೆ. ವಿಪರೀತವಾದ ಪಾಶ್ಚಾತ್ಯೀಕರಣ, ಕೃಷಿಯಿಂದ ಲಾಭ ಕಡಿಮೆ ಅನ್ನುವ ಮನಸ್ಥಿತಿಯಿಂದ ಕೃಷಿ ಭೂಮಿಗಳು ಹಡಿಲು ಬೀಳುತ್ತಿವೆ. ಕೃಷಿ ಮಾಡುವುದರಿಂದ ಸದೃಢ ಆರೋಗ್ಯ ನಮ್ಮದಾಗುತ್ತದೆ. ತಾಯಿಯಂತೆ ಪೂಜಿಸುವ ಭೂಮಿಯನ್ನು ಬರಿದಾಗಲು ಬಿಡಬಾರದು. ಈ ನಿಟ್ಟಿನಲ್ಲಿ ಉಡುಪಿಯಲ್ಲಿ ಕೇದಾರೋತ್ಥಾನ ಟ್ರಸ್ಟ್ ಕಾರ್ಯ ಶ್ಲಾಘನೀಯ. ಎಲ್ಲರೂ ಈ ಕಾರ್ಯಕ್ಕೆ ಸ್ಪಂದನೆ ನೀಡಬೇಕು ಎಂದು ಹೇಳಿದರು.
ನೀಲಾವರ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಂದ್ರ ಕುಮಾರ್, ಬಿಜೆಪಿ ರಾಜ್ಯ ಎಸ್. ಟಿ ಮೋರ್ಚಾದ ಕಾರ್ಯದರ್ಶಿ ಉಮೇಶ್ ನಾಯ್ಕ್, ನೀಲಾವರ ಗ್ರಾಮ ಪಂಚಾಯತ್ ಸದಸ್ಯ ರಮೇಶ್ ಪೂಜಾರಿ, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ತಾಲೂಕು ಪಂಚಾಯತ್ ಮಾಜಿ ಸದಸ್ಯೆ ನಳಿನಿ ಪ್ರದೀಪ್ ರಾವ್, ಧನಂಜಯ್ ಅಮೀನ್, ನೀಲಾವರ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಅಡಿಗ, ಕೇದಾರೋತ್ಥಾನ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರ್, ಕೋಶಾಧಿಕಾರಿ ಕೆ. ರಾಘವೇಂದ್ರ ಕಿಣಿ, ಸದಸ್ಯರಾದ ಬಿರ್ತಿ ರಾಜೇಶ್ ಶೆಟ್ಟಿ, ಪ್ರತಾಪ್ ಹೆಗ್ಡೆ ಮಾರಾಳಿ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ ಮತ್ತು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರದ ಹಿರಿಯ ಕ್ಷೇತ್ರ ಅಧಿಕಾರಿಗಳಾದ ಶಂಕರ್ ಮುಂತಾದವರು ಉಪಸ್ಥಿತರಿದ್ದರು.