ಹಡಿಲು ಭೂಮಿ ಕೃಷಿ ಆಂದೋಲನದಡಿ ಕೇದಾರೋತ್ಥಾನ ಟ್ರಸ್ಟ್ ಮೂಲಕ ಗುಂಡಿಬೈಲು ವಾರ್ಡಿನಲ್ಲಿ 5 ಎಕರೆ ಹಡಿಲು ಭೂಮಿಯಲ್ಲಿ ಸಾವಯವ ಕೃಷಿ ಮಾಡಲಾಗುತ್ತಿದ್ದು, ಸೋಮವಾರ ಭಾಗೀರಥಿ ಪೆಟ್ರೋಲ್ ಬಂಕ್ ಬಳಿಯ ಹಡಿಲು ಭೂಮಿ ಕೃಷಿ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಕಾಣಿಯೂರು ಮಠಾಧೀಶರಾದ ಶ್ರೀ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಶಿವ ಸಾಫ್ಟ್‌ಡ್ರಿಂಕ್ಸ್ ಮಾಲಕ ಶೇಖರ್ ಜತ್ತನ್, ಭಾಗೀರಥಿ ಸರ್ವಿಸ್ ಸ್ಟೇಷನ್ ಮಾಲಕ ಪ್ರಕಾಶ್ ಶೆಟ್ಟಿ, ಗುಂಡಿಬೈಲು ಬಿಲ್ಡರ್ ಪ್ರಭಾಕರ್ ಭಟ್ ಅವರೊಂದಿಗೆ ಶಾಸಕ ಕೆ. ರಘುಪತಿ ಭಟ್ ಹಾಲನ್ನು ಅರ್ಪಿಸಿ ಚಾಲನೆ ನೀಡಿದರು.
ಕಾಣಿಯೂರು ಮಠದ ಶ್ರೀ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಮಾತನಾಡಿ, ನಮ್ಮದು ಕೃಷಿ ಪ್ರಧಾನವಾಗಿರುವ ದೇಶ. ಕೃಷಿಯು ಸಮೃದ್ಧವಾದರೆ ಮಾತ್ರ ಊರಿನ ಅಭಿವೃದ್ಧಿ ಸಾಧ್ಯ. ಭೂಮಿಯನ್ನು ಹಸಿರಾಗಿಸುವ ಕಾರ್ಯವು ಹೆಚ್ಚೆಚ್ಚು ನಡೆಯಬೇಕಿದೆ. ಕೇದಾರೋತ್ಥಾನ ಟ್ರಸ್ಟ್ ಹಡಿಲು ಭೂಮಿಯನ್ನು ಹಸನಾಗಿಸುತ್ತಿರುವ ಕೆಲಸ ದೇವರು ಮೆಚ್ಚುವಂತಹ ಕೆಲಸ. ಯುವಜನರು ಕೃಷಿಯಲ್ಲಿ ತೊಡಗಿಸಿಕೊಳ್ಳಲು ಶಾಸಕ ರಘುಪತಿ ಭಟ್ ನೇತೃತ್ವದ ಟ್ರಸ್ಟ್ ಕಾರ್ಯವು ಪ್ರೇರಣೆ ನೀಡಲಿ ಎಂದರು.
ನಗರಸಭಾ ಸದಸ್ಯ ಪ್ರಭಾಕರ್ ಪೂಜಾರಿ, ಹಿರಿಯ ಕೃಷಿಕ ರಾಘವೇಂದ್ರ ಭಟ್, ಸಂಜೀವ ಜತ್ತನ್, ರಾಜೀವ ಶೆಟ್ಟಿ, ಕೇದಾರೋತ್ಥಾನ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರ್, ಕೋಶಾಧಿಕಾರಿ ಕೆ. ರಾಘವೇಂದ್ರ ಕಿಣಿ, ಜನತಾ ವ್ಯಾಯಾಮ ಶಾಲೆ, ಮಹಿಳಾ ಮಂಡಳಿ, ಜೆ.ಸಿ.ಐ ದೊಡ್ಡಣ್ಣಗುಡ್ಡೆ, ನಮೋ ಫ್ರೆಂಡ್ಸ್ ದೊಡ್ಡಣಗುಡ್ಡೆ ಸರ್ವ ಸದಸ್ಯರು ಉಪಸ್ಥಿತರಿದ್ದರು.