ಮಲ್ಪೆ: ಈ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪದವಿ ಕಾಲೇಜುಗಳಲ್ಲಿ ಅನುಷ್ಠಾನಗೊಳಿಸಲು ಸರಕಾರವು ನಿರ್ಧರಿಸಿದೆ. ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಉಡುಪಿ ಇಲ್ಲಿ ಹೊಸದಾಗಿ ದಾಖಲಾದ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಹೊಸ ಶಿಕ್ಷಣ ನೀತಿಯ ಕುರಿತಾದ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.
ಶಿಕ್ಷಣ ತಜ್ಞರಾದ ದಯಾನಂದ ಶೆಟ್ಟಿ ಕೊಜಕುಳಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಹೊಸ ಶಿಕ್ಷಣ ನೀತಿಯ ಅನುಷ್ಠಾನದ ಅಗತ್ಯವನ್ನು ವಿವರಿಸಿದರು. ಪ್ರಾಂಶುಪಾಲ ಡಾ. ಗಣನಾಥ ಎಕ್ಕಾರು ಅಧ್ಯಕ್ಷತೆ ವಹಿಸಿದ್ದರು. ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ಗೋಪಾಲಕೃಷ್ಣ ಎಂ. ಗಾಂವ್ಕರ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ರೀತಿಯನ್ನು ವಿವರಿಸಿದರು. ಐ.ಕ್ಯೂ.ಎ.ಸಿ. ಸಂಯೋಜಕ ಡಾ. ಸುರೇಶ್ ರೈ ಕೆ. ಮತ್ತು ಎನ್‌ಇಪಿ ಸಂಯೋಜಕ ಡಾ. ರಾಜಶೇಖರ್ ಕುಂಬಾರ ಉಪಸ್ಥಿತರಿದ್ದರು.
ಎನ್‌ಇಪಿ ಟಾಸ್ಕ್ ಪೋರ್ಸ್ನ ಮುಖ್ಯಸ್ಥರಾದ ಡಾ. ಸುನೀತಾ ವಿ. ಸ್ವಾಗತಿಸಿ, ಉಮೇಶ್ ಪೈ ವಂದಿಸಿದರು. ಆಂಗ್ಲ ವಿಭಾಗದ ಮುಖ್ಯಸ್ಥೆ ಶರ್ಮಿಳಾ ಹಾರಾಡಿ ಕಾರ್ಯಕ್ರಮ ನಿರೂಪಿಸಿದರು.