ಬಾರ್ಕೂರು: ಬದಲಾಗುತ್ತಿರುವ ಜಾಗತಿಕ ಆರ್ಥಿಕ ಶೈಕ್ಷಣಿಕ ರಂಗದಲ್ಲಿ ನಮ್ಮ ವಿದ್ಯಾರ್ಥಿಗಳು ಸ್ಪರ್ಧಾತ್ಮಕವಾಗಿ ಎದುರಿಸಿ ನಿಲ್ಲಬೇಕಾದರೆ ಅದಕ್ಕೆ ಪೂರಕವಾದ ಶಿಕ್ಷಣ ನೀಡಬೇಕಾದ ಅನಿವಾರ್ಯತೆ ಇದೆ. ಈ ದಿಕ್ಕಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಹೆಚ್ಚು ಅರ್ಥಪೂರ್ಣವಾಗಿ ಸದೃಢವಾಗಿ ಹೊರಹೊಮ್ಮಿದೆ ಎಂದು ಅಂಕಣಕಾರ ನಿವೃತ್ತ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಹೇಳಿದರು.
ಅವರು ಬಾರಕೂರು ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಪದವಿ ಕಾಲೇಜಿನ ಆಂತರಿಕ ಗುಣಮಟ್ಟ ಕೋಶದ ಆಶ್ರಯದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವದ ಬೆಳವಣಿಗೆಗೆ ಹೆಚ್ಚು ಒತ್ತು ನೀಡುವ ಶಿಕ್ಷಣ ನೀತಿ ಇದಾಗಿದ್ದು ವಿದ್ಯಾರ್ಥಿ ಸ್ನೇಹಿ ನೀತಿ ಅನ್ನಿಸಿಕೊಂಡಿದೆ. ಗಳಿಸುವ ಜ್ಞಾನಕ್ಕೂ ಬದುಕಿನ ಉದ್ಯೋಗಕ್ಕೂ ನೇರ ಸಂಬಂಧ ಕಲ್ಪಿಸಿರುವುದು ಈ ನೀತಿಯ ವಿಶೇಷತೆ. ಸರ್ಕಾರ ರಾಷ್ಟ್ರೀಯ ಉತ್ಪನ್ನದ ಶೇ.6 ರಷ್ಟು ಹಣವನ್ನು ಶಿಕ್ಷಣಕ್ಕಾಗಿ ಮೀಸಲಿಡಲು ಮುಂದಾಗಿದ್ದು ಭಾರತದ ಶೈಕ್ಷಣಿಕ ಕ್ಷೇತ್ರದಲ್ಲಿಯೇ ಇದೊಂದು ಕ್ರಾಂತಿಕಾರಿ ನಿರ್ಧಾರವಾಗಿದ್ದು ಇದನ್ನು ಯಶಸ್ವಿಗೊಳಿಸುವಲ್ಲಿ ಶಿಕ್ಷಣ ಇಲಾಖೆ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚು ಆಸಕ್ತಿ ವಹಿಸಿ ಪಾಲುಗೊಳ್ಳಬೇಕಾದ ಅನಿವಾರ್ಯತೆಯಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಭಾರ ಪ್ರಾಂಶುಪಾಲ ಪ್ರೊ. ಶ್ರೀನಿವಾಸ ಶೆಟ್ಟಿ ವಹಿಸಿದ್ದರು. ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕ ಡಾ.ರಾಜಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥ ಚಿಕ್ಕಹನುಮಯ್ಯ ಸ್ವಾಗತಿಸಿ, ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಶ್ರುತಿ ಆಚಾರ್ಯ ವಂದಿಸಿದರು. ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕ ವೀರಣ್ಣ ಎಸ್. ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು, ಪೋಷಕರು, ಹಾಗೂ ಉಪನ್ಯಾಸಕರು ಮಾಹಿತಿ ಕಾರ್ಯಗಾರದಲ್ಲಿ ಭಾಗವಹಿಸಿದರು.