ಕುಂದಾಪುರ: ಗಂಗೊಳ್ಳಿಯ ಯುವ ಲೇಖಕ ಮತ್ತು ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಅವರ ಬಹುಮುಖ ಪ್ರತಿಭೆಯನ್ನು ಗುರುತಿಸಿ ತಲ್ಲೂರಿನ ಸಪ್ತಸ್ವರ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿ ದೇವಾಡಿಗ ಉಪ್ಪಿನಕುದ್ರು ಇವರು ವೈಯಕ್ತಿಕ ನೆಲೆಯಲ್ಲಿ ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ ಸನ್ಮಾನಿಸಿದರು.
ಬಳಿಕ ಮಾತನಾಡಿದ ಅವರು, ನಮ್ಮ ನಡುವಿನ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ ಗೌರವಿಸುವ ಕಾರ್ಯ ನಿರಂತರವಾಗಿ ಆಗಬೇಕಿದೆ. ಆ ಮೂಲಕ ಇಂತಹ ಕಾರ್ಯಗಳು ಮತ್ತಷ್ಟು ಪ್ರತಿಭೆಗಳ ಬೆಳವಣಿಗೆಗೆ ಪ್ರೇರಣೆ ಆಗಬೇಕಿದೆ ಎಂದು ಹೇಳಿದರು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ನರೇಂದ್ರ ಎಸ್ ಗಂಗೊಳ್ಳಿ, ಸಮಾಜದಿಂದ ಪಡೆದಂತಹ ಗೌರವ ಎನ್ನುವುದು ವ್ಯಕ್ತಿಯ ನೈತಿಕ ಸ್ಥೈರ್ಯ ಮತ್ತು ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಭವಿಷ್ಯದಲ್ಲಿ ಮತ್ತಷ್ಟು ಸಾಧನೆಗಳನ್ನು ಮಾಡಲು ಪ್ರೇರಣೆಯನ್ನು ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.
ಗಂಗೊಳ್ಳಿ ದೇವಾಡಿಗ ಸಮಾಜದ ಪ್ರಮುಖರಾದ ಶಂಕರ ದೇವಾಡಿಗ, ನರಸಿಂಹ ದೇವಾಡಿಗ, ರಾಜ ದೇವಾಡಿಗ, ಗುರುರಾಜ ದೇವಾಡಿಗ, ಶ್ರೀಧರ ದೇವಾಡಿಗ, ಮಾಧವ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.
ಸವಿತಾ ಉಮಾನಾಥ ದೇವಾಡಿಗ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಂಜುಳ ದೇವಾಡಿಗ ಸ್ವಾಗತಿಸಿ, ರಾಜ ದೇವಾಡಿಗ ವಂದಿಸಿದರು.