ಉಡುಪಿ: ಜಿಲ್ಲೆಯಾದ್ಯಂತ ಸರಳ ರೀತಿಯಲ್ಲಿ ನಾಗರಪಂಚಯಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಶ್ರೀ ಕೃಷ್ಣ ಮಠದಲ್ಲಿ ಸೋದೆ ಶ್ರೀ ವಾದಿರಾಜ ಶ್ರೀಪಾದರಿಂದ ಪ್ರತಿಷ್ಠಾಪನೆಗೊಂಡ ಸುಬ್ರಹ್ಮಣ್ಯ ದೇವರ ಗುಡಿಯಲ್ಲಿ ನಾಗರಪಂಚಮಿ ಪ್ರಯುಕ್ತ ಪರ್ಯಾಯ ಅದಮಾರು ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ನಾಗದೇವರಿಗೆ ವಿಶೇಷ ಪೂಜೆ ನೆರವೇರಿಸಿದರು.
ಗೋಪಾಲಪುರ ಸಾರ್ವಜನಿಕ ನಾಗಬನದಲ್ಲಿ ಶುಕ್ರವಾರ ಸರಳ ರೀತಿಯಲ್ಲಿ ನಾಗರಪಂಚಮಿ ಆಚರಿಸಲಾಯಿತು. ಪ್ರಧಾನ ಅರ್ಚಕ ಅರವಿಂದ ಭಟ್ ನೇತೃತ್ವದಲ್ಲಿ ಪಂಚಾಮೃತ ಅಭಿಷೇಕ, ಸೀಯಾಳ ಅಭಿಷೇಕ, ವಿಶೇಷ ಅಲಂಕಾರ, ಲೋಕಕಲ್ಯಾಣಾರ್ಥಕ್ಕಾಗಿ ಪ್ರಾರ್ಥನೆ, ಮಹಾಪೂಜೆ ನಡೆಯಿತು. ಸಮಿತಿಯ ಪ್ರಮುಖರಾದ ಬಿ.ಪಿ. ಭಂಡಾರಿ, ಡಾ. ರಮೇಶ್ ರಾವ್, ಮೋಹನ್ ರಾವ್, ಮಾಜಿ ನಗರಸಭಾ ಸದಸ್ಯ ಚಂದ್ರಕಾಂತ್ ನಾಯ್ಕ್, ಜಗದೀಶ್, ಮಂಜುನಾಥ್,
ಸುರೇಶ್ ಶೆಟ್ಟಿ, ತಾರನಾಥ್ ಮುಂತಾದವರು ಉಪಸ್ಥಿತರಿದ್ದರು.


ಬೆಳ್ಳರ್ಪಾಡಿಯ ಸಪರಿವಾರ ಶ್ರೀ ನಾಗಬ್ರಹ್ಮಸ್ಥಾನ ಸನ್ನಿಧಿಯಲ್ಲಿ ನಾಗರಪಂಚಮಿ ಪ್ರಯುಕ್ತ ಡಾ. ಲಕ್ಷ್ಮೀನಾರಾಯಣ ಉಪಾಧ್ಯಾಯರ ನೇತೃತ್ವದಲ್ಲಿ ಪಂಚಾಮೃತ ಅಭಿಷೇಕ, ಸೀಯಾಳ ಅಭಿಷೇಕ ಪ್ರಸನ್ನ ಪೂಜೆ ನಡೆಯಿತು. ವಿಜೇತ್ ಕುಮಾರ್ ಬೆಳ್ಳರ್ಪಾಡಿ, ರಾಘವೇಂದ್ರ ಪ್ರಭು ಕರ್ವಾಲು, ರಮೇಶ್ ನಾಯಕ್, ಕೇಶವ ನಾಯಕ್, ಸತ್ಯನಾರಾಯಣ, ಯಶವಂತ ನಾಯಕ್, ಗುರುಪ್ರಸಾದ್ ಮತ್ತಿತರ ಬೋರ್ಕರ್ ಕುಟುಂಬಸ್ಥರು ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು.


ಕಟಪಾಡಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಕೆಳಗಿನ ಮಠ ಕಟಪಾಡಿ ಇದರ ನಾಗಬನದಲ್ಲಿ ಸರಳ ರೀತಿಯಲ್ಲಿ ನಾಗರಪಂಚಮಿಯನ್ನು ಆಚರಿಸಲಾಯಿತು. ಲಕ್ಷ್ಮೀನಾರಾಯಣ ಭಟ್, ರಾಘವೇಂದ್ರ ಭಟ್, ನರಸಿಂಹ ಭಟ್, ನಾಗೇಶ್ ಕಾಮತ್, ಮಂಚಕಲ್ ಕಾಮತ್ ಕುಟುಂಬಸ್ಥರು ಉಪಸ್ಥಿತರಿದ್ದರು.


ಕಾಪು ಶ್ರೀ ವೆಂಕಟರಮಣ ದೇವಳ ನಾಗಸನ್ನಿಧಿಯಲ್ಲಿ ನಾಗರಪಂಚಮಿ ಪರ್ವಕಾಲದಲ್ಲಿ ಪಂಚಾಮೃತ ಅಭಿಷೇಕ, ಪ್ರಸನ್ನ ಪೂಜೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.