ಉಡುಪಿ, ಡಿ.19: ಉಡುಪಿ ನಗರ ಭಾಗದಲ್ಲಿ ಸಾರ್ವಜನಿಕರ ಸೇವೆಗೆ ಹೆಚ್ಚುವರಿ ನರ್ಮ್ ಬಸ್ ಅಗತ್ಯವಿದ್ದು, ಹಾಗೂ ಕೊರೊನಾ ಸಂದರ್ಭದಲ್ಲಿ ಸೇವೆಯಿಂದ ಸ್ಥಗಿತಗೊಳಿಸಿರುವ 13 ರೂಟುಗಳ ಬಸ್ ಸೇವೆ ಪುನರಾರಂಭ ಮಾಡುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಯವರಿಗೆ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಮನವಿ ಮಾಡಿದರು.
ಉಡುಪಿಯಲ್ಲಿ ಸುಮಾರು 9-10 ವರ್ಷಗಳ ಹಿಂದೆ ನರ್ಮ್ ಬಸ್ಸುಗಳ ಓಡಾಟಕ್ಕೆ ಚಾಲನೆ ನೀಡಲಾಗಿದ್ದು ಪ್ರಾರಂಭದಲ್ಲಿ 45 ನರ್ಮ್ ಬಸ್‌ಗಳು 33 ರೂಟ್‌ಗಳಲ್ಲಿ ಕಾರ್ಯಾಚರಿಸುತ್ತಿದ್ದವು. ಕೊರೋನಾ ಸಂದರ್ಭದಲ್ಲಿ ಸದ್ರಿ ಬಸ್ಸುಗಳ ಓಡಾಟವನ್ನು ಸಾಂಕ್ರಾಮಿಕ ರೋಗ ಪ್ರಸರಣ ತಡೆಯ ಕಾರಣಕ್ಕಾಗಿ ಮಾರ್ಗಸೂಚಿಯಂತೆ ನಿಲ್ಲಿಸಲಾಗಿತ್ತು. ಕೊರೋನಾ ಬಳಿಕ 13 ಬಸ್ಸುಗಳ ಓಡಾಟವನ್ನು ಖಾಯಂ ಆಗಿ ಸ್ಥಗಿತಗೊಳಿಸಲಾಗಿರುತ್ತದೆ. ಪ್ರಸ್ತುತ 20 ರೂಟ್‌ಗಳಲ್ಲಿ 32 ಬಸ್ಸುಗಳು ಓಡಾಟ ನಡೆಸುತ್ತಿವೆ.
45 ಬಸ್ಸುಗಳ ಮಂಜೂರಾತಿಯು 10 ವರ್ಷಗಳ ಹಿಂದಿನ ಸಮೀಕ್ಷೆಯಂತೆ ಮಂಜೂರಾಗಿದ್ದು, ಈಗಿನ ಬೇಡಿಕೆಯಂತೆ ಸಾರ್ವಜನಿಕರ ಅನುಕೂಲಕ್ಕಾಗಿ ಕನಿಷ್ಠ 80 ನರ್ಮ್ ಬಸ್ಸುಗಳಿಗೆ ಹೆಚ್ಚಿಸಬೇಕಾದ ಅಗತ್ಯವಿದೆ. ಉಡುಪಿ ನಗರದಲ್ಲಿ ಕಾರ್ಯಾಚರಿಸುತ್ತಿರುವ 32 ನರ್ಮ್ ಬಸ್ಸುಗಳು ತೀರಾ ಹಳೆಯದಾಗಿದ್ದು, ಆಗಾಗ ಮಾರ್ಗ ಮಧ್ಯೆ ಕೆಟ್ಟು ನಿಲ್ಲುತ್ತಿರುವ ಘಟನೆಗಳು ಸಂಭವಿಸುತ್ತಿದೆ. ಬಸ್ಸುಗಳಿಗೆ ಚಾಲಕರು ಮತ್ತು ನಿರ್ವಾಹಕರ ಕೊರತೆಯೂ ಇದೆ.
ಉಡುಪಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ಕಾರ್ಮಿಕ ವರ್ಗಕ್ಕೆ ಉತ್ತಮ ಸರಕಾರಿ ಬಸ್ ಸೇವೆ ನೀಡುವ ನಿಟ್ಟಿನಲ್ಲಿ ಹೆಚ್ಚುವರಿ ಬಸ್ ಮಂಜೂರು ಮಾಡಿ ಸಹಕರಿಸುವಂತೆ ಕ್ಷೇತ್ರದ ಜನತೆಯ ಪರವಾಗಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿಯವರಿಗೆ ಮನವಿ ಮಾಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.