ಉಡುಪಿ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಇವರ ನಿರ್ದೇಶನದ ಮೇರೆಗೆ ಉಡುಪಿ, ಕುಂದಾಪುರ, ಮತ್ತು ಕಾರ್ಕಳ ನ್ಯಾಯಾಲಯಗಳ ಆವರಣದಲ್ಲಿ ಮೆಗಾ ಲೋಕ್ ಅದಾಲತನ್ನು ಬರುವ ಅಗಸ್ಟ್ 14 ರಂದು ಆಯೋಜಿಸಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರಿಗೆ ಪೂರ್ವ ಮಾಹಿತಿ ಒದಗಿಸುವ ಕಾರ್ಯಕ್ರಮವು ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಹಾಗೂ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಆಯೋಜನೆಯಲ್ಲಿ ಶೋಕಮಾತಾ ಚರ್ಚಿನ ಎದುರಿನ ಕವಿ ಮುದ್ದಣ ಮಾರ್ಗದಲ್ಲಿ ಸೋಮವಾರ ನಡೆಯಿತು.
ಜಾಗೃತಿ ಜಾಥವು ಶೋಕಾಮಾತಾ ಚರ್ಚ್ ಇಲ್ಲಿಂದ ಹೊರಟು, ಕವಿ ಮುದ್ದಣ ಮಾರ್ಗದ ಮೂಲಕ ಸಾಗಿ ಬಂದು, ಚಿತ್ತರಂಜನ್ ಸರ್ಕಲ್ ಬಳಿ ಸಮಾಪನಗೊಂಡಿತು. ಸಾರ್ವಜನಿಕರಿಗೆ ಮಾಹಿತಿ ಕರಪತ್ರಗಳನ್ನು ವಿತರಿಸಲಾಯಿತು.
ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ, ಸಿವಿಲ್ ನ್ಯಾಯಾಧೀಶೆ ಶರ್ಮಿಳಾ ಎಸ್ ಅವರು ಮಾತನಾಡುತ್ತಾ, ಸಾರ್ವಜನಿಕರು ತಮ್ಮ ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಶೀಘ್ರವಾಗಿ ಪರಿಹಾರ ಪಡೆದುಕೊಳ್ಳಬಹುದು. ಹಾಗೂ ರಾಜೀ ಮೂಲಕ ಇತ್ಯರ್ಥ ಪಡಿಸಿಕೊಳ್ಳಬಹುದಾದ ಪ್ರಕರಣಗಳ ಕುರಿತು ಮಾಹಿತಿಯನ್ನು ನೀಡಿದರು.
ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ಪ್ರಮೋದ್ ಕುಮಾರ್ ಅವರು ಮಾತನಾಡುತ್ತಾ, ಕಾನೂನು ಸೇವೆಗಳ ಪ್ರಾಧಿಕಾರದ ಲೋಕ ಅದಾಲತ್ ಕಾರ್ಯಕ್ರಮದ ಪ್ರಯೋಜನವನ್ನುಸಾರ್ವಜನಿಕರು ಪಡೆಯುವಂತೆ ಕರೆ ನೀಡಿದರು. ಶೋಕಾಮಾತಾ ಧರ್ಮಕೇಂದ್ರದ ಧರ್ಮ ಗುರುಗಳಾದ ವಂದನೀಯ ಚಾರ್ಲ್ಸ್ ಮಿನೇಜಸ್ ಶುಭ ಹಾರೈಸಿದರು.
ನ್ಯಾಯಧೀಶೆ ಕೆ.ಅಮೃತಕಲಾ, ಫಾ. ವಿಲಿಯಂ ಮಾರ್ಟಿಸ್, ನಾಗರಿಕ ಸಮಿತಿಯ ಸಹ ಸಂಚಾಲಕ ತಾರಾನಾಥ್ ಮೇಸ್ತ ಶಿರೂರು, ಸದಸ್ಯ ರಾಜೇಶ್ ಕಾಪು, ಶೋಕಾಮಾತಾ ಚರ್ಚಿನ ಆಡಳಿತ ಮಂಡಳಿಯ ಸದಸ್ಯರು, ಹರ್ಷ ಮಳಿಗೆಯ ಸಿಬ್ಬಂದಿಗಳು, ಆದರ್ಶ್ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರು ಪ್ರಾಸ್ತವನೆಗೈದರು. ಕೆ.ಬಾಲಗಂಗಾಧರ ರಾವ್ ವಂದಿಸಿದರು.