ಬೆಂಗಳೂರು, ಸೆ.22: ಉಡುಪಿ ಜಿಲ್ಲಾ ಟ್ಯಾಕ್ಸಿ ಮೆನ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್ ವತಿಯಿಂದ ಮ್ಯಾಕ್ಸಿಕ್ಯಾಬ್ ನ ಜಿಪಿಎಸ್ ಹಾಗೂ ಪ್ಯಾನಿಕ್ ಬಟನ್ ಕಡ್ಡಾಯ ಮಾಡಿರುವ ನಿಯಮವನ್ನು ಸಡಿಲಿಕೆ ಮಾಡುವುದು ಹಾಗೂ ವಿವಿಧ ಬೇಡಿಕೆಗಳ ಪರಿಹಾರಕ್ಕಾಗಿ ಟ್ಯಾಕ್ಸಿಮೆನ್ ಅಸೋಸಿಯೇಷನ್ ನಿಯೋಗವು ಮಾಜಿ ಶಾಸಕ ಹಾಗೂ ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷರಾದ ಕೆ. ರಘುಪತಿ ಭಟ್ ಅವರ ನೇತೃತ್ವದಲ್ಲಿ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಸಚಿವರೊಂದಿಗೆ ಸುದೀರ್ಘವಾಗಿ ಸಮಾಲೋಚನೆ ನಡೆಸಲಾಯಿತು. ಟ್ಯಾಕ್ಸಿಮೆನ್ ಅಸೋಸಿಯೇಷನ್ ನೀಡಿದ ಮನವಿಗೆ ಪೂರಕವಾಗಿ ಸ್ಪಂದಿಸಿದ ಸಚಿವರು ಸಾರಿಗೆ ಆಯುಕ್ತರೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು. ಬಳಿಕ ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್ ನಿಯೋಗ ಸಾರಿಗೆ ಆಯುಕ್ತರನ್ನು ಭೇಟಿಯಾಗಿ ಸಮಸ್ಯೆಗಳ ಪರಿಹಾರ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಟ್ಯಾಕ್ಸಿಮೆನ್ ಅಧ್ಯಕ್ಷರಾದ ಕೆ ಆನಂದ್, ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ರಮೇಶ್ ಕೆ ಕೋಟ್ಯಾನ್, ಕೋಶಾಧಿಕಾರಿ ಪ್ರಕಾಶ್ ಅಡಿಗ , ಜೊತೆ ಕೋಶಾಧಿಕಾರಿ ಕೃಷ್ಣ ಕೋಟ್ಯಾನ್, ಸಂಘಟನಾ ಕಾರ್ಯದರ್ಶಿ ಬಿ ವಿಕ್ರಂ ರಾವ್, ಬೆಂಗಳೂರು ಟ್ಯಾಕ್ಸಿಮೆನ್ ಅಧ್ಯಕ್ಷರಾದ ಶಿವಣ್ಣ ಹಾಗೂ ರಾಜಕುಮಾರ್ ಮತ್ತು ರಾಧಾಕೃಷ್ಣ ಹೊಳ್ಳ ಉಪಸ್ಥಿತರಿದ್ದರು.