ಉಡುಪಿ: ಗುಂಡಿಯಲ್ಲಿ ಬಿದ್ದು, ಗಾಯಾಳಾಗಿ ಅಸಹಾಯಕ ಸ್ಥಿತಿಯಲ್ಲಿದ್ದ ಯುವಕನನ್ನು ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ರಕ್ಷಿಸಿ, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ ಘಟನೆ ಇಂದು ನಡೆದಿದೆ.
ಅಗ್ನಿಶಾಮಕ ದಳದ ಎಂ ಕೇಶವ್ ಅವರ ಮುಂದಾಳತ್ವದ ತಂಡವು, ಗುಂಡಿಯಲ್ಲಿದ್ದ ಗಾಯಾಳನ್ನು ಮೇಲಕ್ಕೆತ್ತುವ ಯಶಸ್ವಿ ಕಾರ್ಯಚರಣೆ ನಡೆಸಿತು. ಗುಂಡಿಯಲ್ಲಿ ನೀರಿಲ್ಲದ ಕಾರಣ ಗಾಯಾಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಂಬಾಗಿಲು ಇಲ್ಲಿಯ ವಾಣಿಜ್ಯ ಸಂಕೀರ್ಣದ ವಠಾರದಲ್ಲಿದ್ದ ನೀರಿನ ಟ್ಯಾಂಕಿನೊಳಗೆ ಅಪರಿಚಿತ ವ್ಯಕ್ತಿಯೊಬ್ಬರು ರಾತ್ರಿ ಸಮಯದಲ್ಲಿ ಆಕಸ್ಮಿಕವಾಗಿ ಬಿದ್ದು ಗಾಯಾಳಾಗಿ ಅಸಹಾಯಕ ಸ್ಥಿತಿಯಲ್ಲಿದ್ದರು.
ಈ ಬಗ್ಗೆ ಮುಂಜಾನೆ ವಿಷಯ ತಿಳಿದ ಸ್ಥಳೀಯ ವಿಶ್ವನಾಥ್ ಎನ್ನುವರು, ಸಮಾಜ ಸೇವಕರಿಗೆ ವಿಷಯ ಮುಟ್ಟಿಸಿದ್ದರು. ಗಾಯಾಳು ವ್ಯಕ್ತಿಯ ಹೆಸರು ಗುರುರಾಜ್ ಎಂದು ಹೇಳಲಾಗಿದೆ.