ಉಡುಪಿ: ಸರಕಾರವು ಅಂಗನವಾಡಿ ಕೇಂದ್ರಗಳ ಮೂಲಕ ಪೌಷ್ಠಿಕ ಆಹಾರವನ್ನು ಗರ್ಭಿಣಿ ಬಾಣಂತಿ ಹಾಗೂ ಮಕ್ಕಳಿಗೆ ವಿತರಣೆ ಮಾಡುತ್ತಿದೆ. ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಆರೋಗ್ಯ ತಪಾಸಣೆಯನ್ನು ನಡೆಸುತ್ತಿದ್ದು, ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಫಲಾನುಭವಿಗಳು ಸರ್ಕಾರದ ಸೇವೆಗಳ ಸದುಪಯೋಗ ಪಡೆದುಕೊಳ್ಳಬಹುದು ಎಂದು ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಹೇಳಿದರು.
ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಉಡುಪಿ ಇವರ ಸಂಯುಕ್ತಾಶ್ರಯದಲ್ಲಿ, ಪೋಷಣ್ ಅಭಿಯಾನ, ಪೋಷಣ್ ಮಾಸಾಚರಣೆ-ಸೆಪ್ಟಂಬರ್ 2021 ಹಾಗೂ ಮಾತೃವಂದನಾ ಸಪ್ತಾಹ-2021 ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಡುಪಿ ತಾಲೂಕು ಆರೋಗ್ಯ ಅಧಿಕಾರಿ ಡಾ. ವಾಸುದೇವ ಉಪಾಧ್ಯಾಯ ಮಾತನಾಡಿ, ಪ್ರತಿದಿನ ಆಹಾರದಲ್ಲಿ ನೈಸರ್ಗಿಕ ಮತ್ತು ಸ್ಥಳೀಯವಾಗಿ ಲಭ್ಯವಿರುವ ಪೌಷ್ಠಿಕಾಂಶವುಳ್ಳ ಆಹಾರವನ್ನು ಸೇವಿಸುವುದರೊಂದಿಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಆಧ್ಯಾತ್ಮಿಕ ಚಿಂತನೆಗಳನ್ನು ಅಳವಡಿಸಿಕೊಳ್ಳುವುದು ಉತ್ತಮ ಎಂದರು.
ತಾಯಿ ಹಾಗೂ ಮಕ್ಕಳ ಆರೋಗ್ಯಕ್ಕಾಗಿ ಹಾಗೂ ಮರಣ ಪ್ರಮಾಣ ಕಡಿಮೆ ಮಾಡಲು ಸರಕಾರವು ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಈ ಯೋಜನೆಗಳ ಪ್ರಯೋಜನವನ್ನು ಪಡೆದು ಆರೋಗ್ಯಯುತ ಮಕ್ಕಳು ಜನಿಸುವುದರಿಂದ ಸದೃಢ ಸಮಾಜದ ನಿರ್ಮಾಣವಾಗುವಲ್ಲಿ ಸಹಕರಿಸುವಂತೆ ಮತ್ತು ಕೋವಿಡ್-19 ಬಗ್ಗೆ ಜಾಗೃತಿ ಮೂಡಿಸಿ ಗರ್ಭಿಣಿ ಹಾಗೂ ಬಾಣಂತಿಯರು ಕೋವಿಡ್ ಲಸಿಕೆಗಳನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ವಿವೇಕಾನಂದ ಮಾತೃವಂದನಾ ಯೋಜನೆ ಹಾಗೂ ಪೋಷಣ್ ಅಭಿಯಾನದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಗರ್ಭಿಣಿ, ಬಾಣಂತಿಯರು, ಮಾತೃವಂದನದ ಜಿಲ್ಲಾ ಸಂಯೋಜಕರು ಮತ್ತಿತರರು ಉಪಸ್ಥಿತರಿದ್ದರು. ಮೇಲ್ವಿಚಾರಕಿ ಸಿಂಧೂ ಭೋಜ ನಿರೂಪಿಸಿ, ಕಾರ್ಯಕರ್ತೆ ಸುಜಾತ ವಂದಿಸಿದರು.