ಕೋಟ: ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟ-ಪಡುಕೆರೆಯಲ್ಲಿ ಗ್ರಂಥಾಲಯ ಸಪ್ತಾಹ ಉದ್ಘಾಟಿಸಲಾಯಿತು.
ಉದ್ಘಾಟನೆಗೈದ ವಿವೇಕ ಪದವಿ ಪೂರ್ವ ಕಾಲೇಜಿನ ನಿವೃತ್ತ ಹಿಂದಿ ಉಪನ್ಯಾಸಕರಾದ ಶ್ರೀನಿವಾಸ ಸೋಮಯಾಜಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಸುಖ:ಮಯ ಬದುಕು, ಜೀವನೋತ್ಸಾಹ ಎಲ್ಲವು ವ್ಯಕ್ತಿ ಕೇಂದ್ರಿತ.
ನಮ್ಮ ಬದುಕಿನ ಸಂತೋಷ ಕ್ರೀಯಾಶೀಲತೆಯನ್ನು ನಾವೇ ಕಂಡುಕೊಳ್ಳಬೇಕು, ಇದಕ್ಕೆ ಅಗತ್ಯವಾದ ಅಂತ:ಸತ್ವ ಪುಸ್ತಕ ಓದುವ ಹವ್ಯಾಸದಿಂದ, ಗ್ರಂಥಾಲಯದ ಸದ್ಬಳಕೆಯಿಂದ ಬೆಳೆಯಬಹುದು. ಇದೇ ಮುಂದೆ ಆದರ್ಶ ನಾಗರೀಕರಣವಾಗಿ ಬೆಳೆಯಲು ಸಹಾಯಕ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಸ್.ಎಂ.ಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಹಾಗೂ ಗ್ರಂಥಪಾಲಕರಾದ ಗಣಪತಿ ಭಟ್, ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಭೇಟಿ ನೀಡುವ ಪರಿಪಾಠ ಬೆಳೆಸಿಕೊಳ್ಳಬೇಕು ಎನ್ನುತ್ತಾ ಹೇಗೆ ಭಾರತದಲ್ಲಿ ಗ್ರಂಥಾಲಯದ ಪಿತಾಮಹ ಎಸ್.ಆರ್.ರಂಗನಾಥನ್‌ರವರ ಜೀವನ-ಸಾಧನೆ ಹಾಗೂ ಭಾರತದಲ್ಲಿ ಗ್ರಂಥಾಲಯದ ಬೆಳವಣಿಗೆಗೆ ಅವರ ಕೊಡುಗೆಯನ್ನು ಪ್ರೇರಣೆಯಾಗಿ ತೆಗೆದುಕೊಳ್ಳಬೇಕೆಂದರು.
ಕಾರ್ಯಕ್ರಮದ ಮಾರ್ಗದರ್ಶಕರಾದ ಪ್ರೊ. ನಿತ್ಯಾನಂದ ವಿ ಗಾಂವಕರ್, ಇಂದಿನ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಕ್ಷೀಣಿಸುತ್ತಿರುವುದು ಆತಂಕಕಾರಿ ಬೆಳವಣಿಗೆ. ಇದನ್ನು ಗಮನದಲ್ಲಿರಿಸಿ ಆಯೋಜಿಸುತ್ತಿರುವ ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿ ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಾಗರಾಜ ವೈದ್ಯ, ಐಕ್ಯೂಎಸಿ ಸಂಚಾಲಕ ರವಿ ಪ್ರಸಾದ್ ಕೆ.ಜಿ ಶುಭ ಹಾರೈಸಿದರು.
ಗ್ರಂಥಾಲಯ ಸಪ್ತಾಹದ ಅಂಗವಾಗಿ ಸರಣಿ ಉಪನ್ಯಾಸ ಮಾಲಿಕೆಯನ್ನು ಹಮ್ಮಿಕೊಳ್ಳಲಾಗಿದ್ದು ವರ್ತಮಾನ ಪತ್ರಿಕೆಗಳು ಮತ್ತು ಲೋಕಜ್ಞಾನ ಕುರಿತಾಗಿ ರಾಜಕೀಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರಶಾಂತ್ ಎನ್, ಪದವಿ ಶಿಕ್ಷಣದಲ್ಲಿ ಪರಾಮಾರ್ಶನ ಗ್ರಂಥಗಳ ಅಧ್ಯಯನ ಮಹತ್ವ ಕುರಿತಾಗಿ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಮಂಜುನಾಥ ಆಚಾರಿ, ಜನಪದ ಸಾಹಿತ್ಯದ ಕುರಿತಾಗಿ ಕನ್ನಡ ವಿಭಾಗದ ಮುಖ್ಯಸ್ಥರಾದ ನಾಗರಾಜ ವೈದ್ಯ, ಡಿಜಿಟಲ್ ಯುಗದಲ್ಲಿ ಮಾಹಿತಿ ಹುಟುಕಾಟದ ವ್ಯಾಪ್ತಿ ಕುರಿತಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಕಳದ ಗ್ರಂಥಪಾಲಕರಾದ ವೆಂಕಟೇಶ್, ಓದುವ ಹವ್ಯಾಸ-ಗ್ರಂಥಾಲಯ ಮತ್ತು ಯುವಜನತೆ ಕುರಿತಾಗಿ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ. ಮುರಳಿ ಎನ್ ಉಪನ್ಯಾಸ ನೀಡಲ್ಲಿದ್ದಾರೆ.
ಜೊತೆಗೆ ದಿನಕ್ಕೊಂದರಂತೆ ಸ್ಪರ್ಧಾತ್ಮಕ ಪರೀಕ್ಷೆಗಳು, ನಿಘಂಟುಗಳು ಮತ್ತು ವಿಶ್ವಕೋಶಗಳು, ಜಾನಪದ ಸಾಹಿತ್ಯ ಕೃತಿಗಳು, ಇಂಗ್ಲಿಷ್ ಸಾಹಿತ್ಯ ಕೃತಿಗಳು, ಪೂರ್ಣಚಂದ್ರ ತೇಜಸ್ವಿ ಕೃತಿಗಳ ಪುಸ್ತಕ ಪ್ರದರ್ಶನ ಹಮ್ಮಿಕೊಳಲಾಗಿದೆ ಎಂದು ಕಾರ್ಯಕ್ರಮ ಆಯೋಜಿಸಿದ ಕಾಲೇಜಿನ ಗ್ರಂಥಪಾಲಕ ಕೃಷ್ಣ ಸಾಸ್ತಾನ ತಿಳಿಸಿದ್ದಾರೆ.
ರಾಜಕೀಯ ಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ಪ್ರಶಾಂತ್ ನೀಲಾವರ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಸಮಾಜಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ಮಂಜುನಾಥ ಆಚಾರಿ ಕಾರ್ಯಕ್ರಮ ನಿರೂಪಿಸಿದರು.
ಕಾಲೇಜಿನ ಬೋಧಕ-ಬೋಧಕೇತರ ವೃಂದದವರು ಹಾಗೂ ಪ್ರಥಮ ಪದವಿಯ ಎಲ್ಲಾ ವಿದ್ಯಾರ್ಥಿಗಳು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.