ಕುಂದಾಪುರ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ನಡೆಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನ್ಯಾಯವಾದಿ ಶರತ್ ಕುಮಾರ್ ಶೆಟ್ಟಿ ಮಾತನಾಡಿ, ನಮ್ಮ ದೇಶದಲ್ಲಿ ಚಾಲ್ತಿಯಲ್ಲಿರುವ ಕಾನೂನಿನ ಬಗೆಗಿನ ವಿವಿಧ ವಿಚಾರಗಳ ಪ್ರಾಥಮಿಕ ಅರಿವು ಪ್ರತಿಯೊಬ್ಬ ನಾಗರಿಕನಲ್ಲಿಯೂ ಇರಬೇಕು.
ಇಂತಹ ಅರಿವಿನ ಜೊತೆಗೆ ಉತ್ತಮ ವ್ಯಕ್ತಿತ್ವವನ್ನು ಕೂಡ ನಮ್ಮದಾಗಿಸಿಕೊಳ್ಳುವ ಮೂಲಕ ಅಪರಾಧ ಮುಕ್ತ ಸಮಾಜದ ನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಯು.ವೆಂಕಟೇಶ ಮೂರ್ತಿ, ನರೇಂದ್ರ ಎಸ್ ಗಂಗೊಳ್ಳಿ ಉಪಸ್ಥಿತರಿದ್ದರು. ಇತಿಹಾಸ ಉಪನ್ಯಾಸಕ ಭಾಸ್ಕರ್ ಶೆಟ್ಟಿ ಸ್ವಾಗತಿಸಿ ವಂದಿಸಿದರು.