ಕೋಟ: ತೆಕ್ಕಟ್ಟೆಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನವೀಕರಣಗೊಂಡ ಪ್ರಯೋಗಾಲಯ ಉದ್ಘಾಟನೆಗೊಂಡಿತು. ಕೆನರಾ ಬ್ಯಾಂಕಿನ ನಿವೃತ್ತ ಅಧಿಕಾರಿಗಳ ಸಂಘಟನೆ ಉಡುಪಿ ಇದರ ಸಹಾಯದಿಂದ ಪ್ರಯೋಗಾಲಯ ನವೀಕರಣಗೊಂಡಿದ್ದು ಸಂಘಟನೆಯ ಅಧ್ಯಕ್ಷ ನಾಗರಾಜು ನವೀಕೃತ ಪ್ರಯೋಗಾಲಯದ ಉದ್ಘಾಟನೆ ನೆರವೇರಿಸಿ ಮಾತನಾಡಿ, ತಮ್ಮ ಸಂಸ್ಥೆಯ ಸಮಾಜಮುಖಿ ಕೆಲಸಗಳ ಬಗ್ಗೆ ತಿಳಿಸಿದರು ಹಾಗೆಯೇ ಕೆನರಾ ಬ್ಯಾಂಕ್ ಸಂಸ್ಥಾಪಕರಾದ ದಿ. ಅಮ್ಮೆಂಬಳ ಸುಬ್ಬರಾವ್ ಪೈ ಅವರ ಸಂಸ್ಮರಣೆ ಮಾಡಿ ಏಳಿಗೆಯ ಬಗ್ಗೆ ಅವರಿಗಿದ್ದ ಕಳಕಳಿಯನ್ನು ಒತ್ತಿಹೇಳಿದರು.
ವಿದ್ಯಾರ್ಥಿಗಳು ಪ್ರಯೋಗಾಲಯದ ಉಪಯೋಗ ಪಡೆದು ಉತ್ತಮ ಅಂಕಗಳಿಸಿ ಭವಿಷ್ಯದಲ್ಲಿ ಉತ್ತಮ ಜೀವನ ನಡೆಸುವಂತಾಗಲಿ ಎಂದು ಹಾರೈಸಿದರು. ನಂತರ ಕೆನರಾ ಬ್ಯಾಂಕಿನ ಸಂಸ್ಥಾಪಕರ ದಿನದ ಸ್ಮರಣಾರ್ಥ ದಿವಂಗತ ಅಮ್ಮಂಬಳ ಸುಬ್ಬರಾವ್ ಪೈ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ತೆಕ್ಕಟ್ಟೆಯ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಲಾಭಿವೃದ್ಧಿ ಸಮಿತಿಯ ಕಾರ್ಯಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಸಹ ಕಾರ್ಯದರ್ಶಿ ಯೋಗೀಶ್ ಭಟ್, ಪ್ರೌಢಶಾಲಾ ವಿಭಾಗದ ಪ್ರಾಂಶುಪಾಲ ಮಾಯ, ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.
ಉಪನ್ಯಾಸಕ ಕೇಶವ ಸ್ವಾಗತಿಸಿ ವಂದನಾರ್ಪಣೆಗೈದರು. ಸಂಘಟನೆಯ ಪದಾಧಿಕಾರಿ ಮಾರುತಿ ಪ್ರಭು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕರಾದ ಶಾರದಾ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು.