ಉಡುಪಿ: ಕೋಡಿಬೆಂಗ್ರೆ ಗ್ರಾಮವು ತಂಬಾಕು ಮುಕ್ತ ಗ್ರಾಮವಾಗಬೇಕು ಎಂದು 20 ವರ್ಷಗಳ ಹಿಂದೆಯೇ ಸ್ಥಳೀಯ ಗ್ರಾಮಸ್ಥರು ನಿರ್ಧರಿಸಿ, ದೃಢ ನಿರ್ದಾರದೊಂದಿಗೆ ತಂಬಾಕು ಮುಕ್ತ ಗ್ರಾಮವಾಗಿಸಿದ್ದರು. ಸರ್ಕಾರದಿಂದ ಘೋಷಣೆಯನ್ನು ಮಾಡುತ್ತಿರುವುದು ಶ್ರೀರಕ್ಷೆಯನ್ನು ಕೊಟ್ಟ ಹಾಗೆ ಆಗಿದೆ. ಇದರಿಂದ ಗ್ರಾಮದ ಗ್ರಾಮಸ್ಥರ ಜವಾಬ್ದಾರಿಯು ಹೆಚ್ಚಿದೆ ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೆಕ್ಷಣಾ ಘಟಕ,ಉಡುಪಿ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ, ತಾಲೂಕು ಆರೋಗ್ಯಧಿಕಾರಿ ಕಚೇರಿ, ಉಡುಪಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕೋಡಿಬೆಂಗ್ರೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಎಲ್ಲಾ ಸಂಘ ಸಂಸ್ಥೆಗಳು ಕೋಡಿಬೆಂಗ್ರೆ ಇವರ ಸಂಯುಕ್ತ ಆಶ್ರಯದಲ್ಲಿ, ವಿಶ್ವ ತಂಬಾಕು ದಿನದ ಅಂಗವಾಗಿ ತಂಬಾಕು ಮುಕ್ತ ಕೋಡಿಬೆಂಗ್ರೆ (ಅಧಿಕೃತ ಘೋಷಣೆ ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಳೆದ 15 ವರ್ಷಗಳ ಹಿಂದೆ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನದಿ ಕಡಲದಡದ ಗ್ರಾಮವಾದ ಕೋಡಿಬೆಂಗ್ರೆ ಗ್ರಾಮದಲ್ಲಿ ಹಿರಿಯರು ಯುವಜನರು ಸೇರಿ ಮದ್ಯ ಹಾಗೂ ತಂಬಾಕು ಮುಕ್ತ ಗ್ರಾಮವಾಗಬೇಕೆಂಬ ದೃಡ ನಿರ್ಣಯವನ್ನು ಕೈಗೊಂಡು ಪೂರ್ಣ ಗ್ರಾಮವನ್ನು ಮದ್ಯ ಹಾಗೂ ತಂಬಾಕು ಮುಕ್ತ ಗ್ರಾಮವಾಗಿರುವುದನ್ನು ಕೇಳಿ ಆಶ್ಚರ್ಯವೆನಿಸಿತು ಎಂದರು.
ಯಾವುದೇ ದುಷ್ಟಟವನ್ನು ಕಲಿತು ಅದರ ದಾಸರಾಗಿ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುವುದರ ಬದಲು, ದುಶ್ಚಟದಿಂದ ಹೊರಬರಬೇಕೆಂಬ ಉತ್ತೇಜನ ಹೊಂದಿ ವ್ಯಸನ ಮುಕ್ತರನ್ನಾಗಿಸುವುದು ಒಂದು ಕಷ್ಟದ ಕಾರ್ಯ ಆದರೆ ಕೋಡಿಬೆಂಗ್ರೆ ಗ್ರಾಮದ ಜನರು ಇದರಿಂದ ಹೊರಬಂದಿರುವುದು ಒಂದು ಉತ್ತಮ ಸಾಧನೆ ಎಂದರು.
ತಂಬಾಕು ಮುಕ್ತ ಗ್ರಾಮವೆಂದು ಕಳೆದ 2-3 ದಶಕಗಳ ಹಿಂದೆಯೇ ಕಾರ್ಯರೂಪಕ್ಕೆ ತಂದಿರುವುದಕ್ಕೆ, ಈ ಗ್ರಾಮವು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹವಾಗಿದೆ ಎಂದ ಅವರು ಸ್ಥಳೀಯ ಗ್ರಾಮದ ಸರ್ವಾಂಗೀಣ ಅಭಿವೃಧ್ದಿ ಕಾರ್ಯಗಳಿಗೆ ಹಾಗೂ ಇಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಸ್ಥಳೀಯ ಮುಖಂಡ ರಮೇಶ್ ಎಸ್ ತಿಂಗಳಾಯ ಪ್ರಾಸ್ತಾವಿಕವಾಗಿ ಮಾತನಾಡಿ, ಕೋಡಿಬೆಂಗ್ರೆ ಗ್ರಾಮವು 290 ಮನೆಯನ್ನು ಹೊಂದಿ 1375 ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, ಒಂದು ಶಾಲೆ ,6 ದೇವಸ್ಥಾನ, 1 ಮಸೀದಿ, 12 ದಿನಸಿ ಅಂಗಡಿಗಳನ್ನು ಒಳಗೊಂಡ ಗ್ರಾಮವಾಗಿದ್ದು, ಸ್ಥಳೀಯ ಜನರು ಒಳಿತು ಕಾರ್ಯಗಳಿಗೆ ಒಗ್ಗಟ್ಟನ್ನು ಪ್ರದರ್ಶಿಸುವುದು ಒಂದು ವಿಶೇಷ ಎಂದರು.
ಹಿಂದೆ ಮದುವೆ ಕಾರ್ಯಕ್ರಮದ ಮುನ್ನಾ ದಿನ ನಡೆಯುವ ವಿಜೃಂಭಣೆಯ ಮೆಹಂದಿ ಕಾರ್ಯಕ್ರಮದಲ್ಲಿ ಯುವಜನರು ಪಾನಮತ್ತರಾಗಿ, ಸಂಗೀತ ಕಾರ್ಯಕ್ರಮದಲ್ಲಿ ತಡರಾತ್ರಿವರೆಗೆ ನರ್ತಿಸುತ್ತಿರುವುದು ಕಂಡ ಹಿರಿಯರು ಯುವಜನರು ದುಶ್ಚಟಕ್ಕೆ ಬಲಿಯಗಬಾರದೆಂಬ ಉದ್ದೇಶದಿಂದ ದುರ್ಗಾಪರಮೇಶ್ವರಿ ದೇವಸ್ಥಾನದ ಸಮಿತಿಯ ಹಾಗೂ ದೇವರ ಆಶೀರ್ವಾದದಿಂದ ಮದ್ಯಪಾನ ಹಾಗೂ ನಶೆ ಮುಕ್ತ ಗ್ರಾಮವಾಗಿಸಬೇಕೆಂಬ ಕರಿಣ ನಿರ್ಧಾರ ಹಾಗೂ ಪರಿಶ್ರಮದಿಂದ ಪ್ರಸ್ತುತ ಗ್ರಾಮ ಇವೆರೆಡರಿಂದ ಮುಕ್ತವಾಗಿದೆ ಎಂದರು.
ಗ್ರಾಮಸ್ಥರ ಜೊತೆಗೆ ಸ್ಥಳೀಯ ವ್ಯಾಪಾರಸ್ಥರು ಸಹ ಇದಕ್ಕೆ ಕೈಜೋಡಿಸಿ ತಮ್ಮ ಅಂಗಡಿ ಮುಂಗಟ್ಟುಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದನ್ನೇ ನಿಲ್ಲಿಸಿ ಈ ಆಂದೋಲನಕ್ಕೆ ಸಹಕರಿಸಿದರು. ಗ್ರಾಮದಲ್ಲಿ ಅನಧಿಕೃತ ಮದ್ಯದಂಗಡಿಗಳನ್ನು ತೆರವುಗೊಳಿಸುವಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿತ್ತು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರಾವಳಿ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ತಂಬಾಕು ಉತ್ಪನ್ನಗಳ ಸೇವನೆಯಿಂದ ಮನುಷ್ಯನ ದೇಹದಲ್ಲಿ ದುಷ್ಪರಿಣಾಮ ಉಂಟಾಗುವುದರ ಜೊತೆಗೆ ಮಾರಣಾಂತಿಕ ಕಾಯಿಲೆಗಳಾದ ಕ್ಯಾನ್ಸರ್, ಹೃದಯರೋಗ, ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಗಳು ಬರುವ ಸಾಧ್ಯತೆ ಇರುವ ಹಿನ್ನಲೆ ಇವುಗಳಿಂದ ದೂರು ಇರುವುದು ಒಳಿತು ಎಂದರು.
ಇದೇ ಸಂದರ್ಭದಲ್ಲಿ ಮದ್ಯ ಮತ್ತು ತಂಬಾಕು ಮುಕ್ತ ಗ್ರಾಮವನ್ನಾಗಿಸಲು ಸಹಕರಿಸಿದ ಹಿರಿಯರು ಹಾಗೂ ಯುವಜನರನ್ನು ಸನ್ಮಾನಿಸಲಾಯಿತು. ಸ್ಥಳೀಯ ಶಾಸಕರಿಗೆ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಬಗ್ಗೆ ಮನವಿಯನ್ನು ಸಲ್ಲಿಸಲಾಯಿತು.
ಸಭೆಯಲ್ಲಿ ಡಿಹೆಚ್‌ಓ ಡಾ. ನಾಗಭೂಷಣ ಉಡುಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರತ್ನ, ಜಿಲ್ಲಾ ಆಹಾರ ಸುರಕ್ಷಿತಾ ಅಧಿಕಾರಿ ಡಾ. ಪ್ರೇಮಾನಂದ, ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಏಡ್ಸ್ ನಿಯಂತ್ರಣಾಧಿಕಾರಿ ಚಿದಾನಂದ ಸಂಜು, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಇಬ್ರಾಹಿಂಪುರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೇಶವ ಕುಂದರ್, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸಂಘದ ಅಧ್ಯಕ್ಷ ಜಯ ಕುಂದರ್, ಮಣಿಪಾಲ ವಿವಿಯ ಪ್ರೊಪೆಸರ್ ಡಾ. ಮುರಳೀಧರ್ ಕುಲಕರ್ಣಿ, ಕೋಡಿಬೆಂಗ್ರೆ ಪ್ರಾಥಮಿಕ ಆರೋಗ್ಯ ಕೆಂದ್ರದ ವೈದ್ಯ ಡಾ. ಸಚ್ಚಿದಾನಂದ ಮುಖಂಡರಾದ ಬಿ.ಬಿ.ಕಾಂಚನ್ ಮತ್ತಿತರರು ಉಪಸ್ಥಿತರಿದ್ದರು.