ಕೊಡವೂರು: ಕೊಡವೂರು ವಾರ್ಡ್ ನಲ್ಲಿ ಕನಕ ಜಯಂತಿಯನ್ನು ದಿವ್ಯಾಂಗ ರಕ್ಷಣಾ ಸಮಿತಿ ವತಿಯಿಂದ ಆಚರಿಸಲಾಯಿತು.
ಸೇವಾ ಭಾರತಿ ಕನ್ಯಾಡಿ (ಬೆನ್ನುಮೂಳೆ ಮುರಿತಕ್ಕೆ ಒಳಗಾದವರ ಪುನಶ್ಚೇತನ ಕೇಂದ್ರ) ಇದರ ಅಧ್ಯಕ್ಷರಾಗಿರುವ ವಿನಾಯಕ ರಾವ್ ಮಾತನಾಡಿ, ಉಡುಪಿ ನಗರಸಭೆಯಲ್ಲಿ ಒಂದಾದ ಕೊಡವೂರು ವಾರ್ಡ್ ಸರಕಾರದ ಅನುದಾನವನ್ನು ಪಡೆಯುವುದರ ಜೊತೆಗೆ ಸೇವಾ ಕಾರ್ಯದ ಮುಖಾಂತರ 28,92,515.00 ರೂಪಾಯಿಯ ಸೇವಾ ಕಾರ್ಯಗಳನ್ನು ಮಾಡುವುದರ ಮುಖಾಂತರ ಎಲ್ಲಾ ಸಮಸ್ಯೆಗಳಿಗೆ ಉತ್ತರ ನೀಡಬೇಕೆಂದು ಯೋಚಿಸಿ ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ ರಚಿಸಿ ಕೃಷಿ, ದಿವ್ಯಾಂಗರಿಗೆ, ನಿರುದ್ಯೋಗಿಗಳಿಗೆ, ಅದಕ್ಕಿಂತಲೂ ಮುಖ್ಯವಾಗಿ ತ್ಯಾಜ್ಯಮುಕ್ತ, ವ್ಯಸನಮುಕ್ತ, ರಾಸಾಯನಿಕ ಮುಕ್ತ ಗ್ರಾಮ ಮಾಡುವ ಉದ್ದೇಶದಿಂದ ಕ್ರಿಯಾಶೀಲ ಪ್ರಯತ್ನ ನಡೆಯುತ್ತಿರುವುದು ಶ್ಲಾಘನೀಯ. ಪಕ್ಷಭೇದ ಮರೆತು ಊರಿನ ಎಲ್ಲರೂ ಸಹಕರಿಸುತ್ತಿರುವುದು ಮಾದರಿ ಗ್ರಾಮದ ಲಕ್ಷಣ ಎಂದರು.
ಯಾವುದೇ ಮನೆಯಲ್ಲಿ ಜಗಳವಾದರೆ ಪೊಲೀಸ್ ಠಾಣೆಗೆ ಹೋಗುವ ಮುಂಚೆ ಊರಿನ ನ್ಯಾಯ ಸಮಿತಿಯ ಹಿರಿಯರ ಮುಖಾಂತರ ಸಂಧಾನ ಕಾರ್ಯ ನಡೆಯುತ್ತದೆ. ಇದು ಮೆಚ್ಚುಗೆಯ ವಿಷಯವಾಗಿದೆ. ವಿಜಯ ಕೊಡವೂರು ಅವರಲ್ಲಿ ನಿಸ್ವಾರ್ಥ ಹೋರಾಟಗಾರ, ಅತ್ಯುತ್ತಮ ಸಂಘಟಕನ ಗುಣವನ್ನು ಕಾಣುತ್ತಿದ್ದೇವೆ. ಇದು ಜನಪ್ರತಿನಿಧಿಗಳಿಗೆ ಮಾದರಿ ಎಂದರು.
ನಗರಸಭಾ ಸದಸ್ಯ ವಿಜಯ ಕೊಡವೂರು ಮಾತನಾಡಿ, ದಿವ್ಯಾಂಗ ರಕ್ಷಣಾ ಸಮಿತಿ ವತಿಯಿಂದ ದುರ್ಬಲರಿಗೆ, ಅನಾಥರಿಗೆ, ದಿವ್ಯಾಂಗರಿಗೆ, ಬೆನ್ನು ಮೂಳೆ ಮುರಿತಕ್ಕೆ ಒಳಗಾದವರಿಗೆ ಇದುವರೆಗೆ ಬೇಕಾಗುವ ಎಲ್ಲಾ ಅವಶ್ಯಕತೆಗಳನ್ನು ಪೂರೈಸಲಾಗಿದೆ.
ಮನೆ ಕಟ್ಟಲು ಸಿಮೆಂಟ್, ಸ್ವಂತ ಉದ್ಯೋಗಕ್ಕಾಗಿ, ಟೈಲರಿಂಗ್ ಮಷೀನ್, ಬತ್ತಿ ಕಟ್ಟುವ ಮಷೀನ್, ದುಡಿಯಲು ಸಾದ್ಯವಿಲ್ಲದಿರುವ ದಿವ್ಯಾಂಗರಿಗೆ ಪ್ರತೀ ತಿಂಗಳು ಅಕ್ಕಿ ವಿತರಣೆ, ಇದಕ್ಕೆ ಊರಿನ ದಾನಿಗಳು ಸಹಕಾರ ನೀಡಿದ್ದಾರೆ. ಇದೇ ರೀತಿ ಮುಂದಿನ ದಿನಗಳಲ್ಲಿ ನಮ್ಮ ವಾರ್ಡಿನ ಎಲ್ಲರಿಗೂ ಆರೋಗ್ಯದ ದೃಷ್ಟಿಯಿಂದ ಮನೆ ಮನೆಗೆ ತೆರಳಿ ಗುಜರಿ ಸಾಮಗ್ರಿಗಳನ್ನು ದಿವ್ಯಾಂಗ ರಕ್ಷಣಾ ಸಮಿತಿ ಅದನ್ನು ಸ್ವೀಕರಿಸಲಾಗುವುದು.
ಮನೆಯಲ್ಲಿರುವ ಹಳೆಯ ಪ್ಲಾಸ್ಟಿಕ್, ಕಬ್ಬಿಣ, ಪೇಪರ್ ಗಳಿದ್ದರೆ ರಕ್ಷಣಾ ಸಮಿತಿಯ ಪ್ರಮುಖರಿಗೆ ತಿಳಿಸಿದ್ದಲ್ಲಿ ಗುಜರಿ ಸಾಮಗ್ರಿಗಳನ್ನು ಪಡೆದುಕೊಂಡು, ಅದನ್ನು ಮಾರಾಟ ಮಾಡಿ ಬಂದ ಹಣದಲ್ಲಿ ದಿವ್ಯಾಂಗರು ಊರಿನ ದುರ್ಬಲರ ಸೇವೆಯನ್ನು ಮಾಡಲು ಸಿದ್ಧತೆ ನಡೆದಿರುವುದು ಸಂತಸದ ಸಂಗತಿ. ಈ ನಿಟ್ಟಿನಲ್ಲಿ ಗ್ರಾಮಸ್ಥರು, ಉಡುಪಿಯ ನಾಗರಿಕರು ಸಹಕರಿಸಬೇಕು ಎಂದರು.
ಕಾರ್ಯದರ್ಶಿ ಸ್ವರ್ಣಲತಾ, ಸೇವಾ ಭಾರತಿಯ ಚರಣ್, ದಿವ್ಯಾಂಗ ರಕ್ಷಣಾ ಸಮಿತಿಯ ಅಧ್ಯಕ್ಷರು ಹರೀಶ್ ಕೊಪ್ಪಲತೋಟ, ವಿಷ್ಣು ಪ್ರಸಾದ್, ರವಿರಾಜ್, ಗಿರೀಶ್, ಮುಂತಾದವರು ಉಪಸ್ಥಿತರಿದ್ದರು.