ಮಣಿಪಾಲ: ವಿಶ್ವ ಮೂಳೆ ಸವಕಳಿ (ಆಸ್ಟಿಯೊಪೊರೋಸಿಸ್) ದಿನವನ್ನು ವಾರ್ಷಿಕವಾಗಿ ಅಕ್ಟೋಬರ್ 20 ರಂದು ಆಚರಿಸಲಾಗುತ್ತದೆ ಮತ್ತು ಆಸ್ಟಿಯೊಪೊರೋಸಿಸ್ ರೋಗದ ತಡೆಗಟ್ಟುವಿಕೆ, ರೋಗ ಪತ್ತೆಹಚ್ಚಲು ಮತ್ತು ಚಿಕಿತ್ಸೆಯ ಕುರಿತು ಜಾಗತಿಕ ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
2021 ರ ವರ್ಷದ ಥೀಮ್ “ಮೂಳೆ ಬಲವನ್ನು ಬಲಪಡಿಸುವುದು” ಮತ್ತು ಘೋಷವಾಕ್ಯ “ಮೂಳೆ ಆರೋಗ್ಯಕ್ಕಾಗಿ ಕ್ರಮ ಕೈಗೊಳ್ಳಿ”. ಈ ಜಾಗೃತಿ ಅಂಗವಾಗಿ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತೆಯ ಮೂಳೆ ಮತ್ತು ಕೀಲಿನ ವಿಭಾಗ ಮತ್ತು ಅಂತಃಸ್ರಾವಶಾಸ್ತ್ರ (ಎಂಡೋಕ್ರ್ಯನೊಲೊಜಿ ) ವಿಭಾಗದ ವತಿಯಿಂದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯನ್ನು ಸಮುದಾಯದಲ್ಲಿ ಆಸ್ಟಿಯೊಪೊರೋಸಿಸ್ ಬಗ್ಗೆ ಅರಿವು ಮೂಡಿಸಲು ಬಿಳಿ ಬಣ್ಣದಲ್ಲಿ ಬೆಳಗಿಸಲಾಯಿತು.
ಕೆಎಂಸಿ ಡೀನ್ ಡಾ. ಶರತ್ ರಾವ್, ಮುಖ್ಯ ನಿರ್ವಹಣಾಧಿಕಾರಿ ಸಿಜಿ ಮುತ್ತಣ್ಣ, ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಮೂಳೆ ಮತ್ತು ಕೀಲಿನ ವಿಭಾಗ ಮುಖ್ಯಸ್ಥ ಡಾ. ಶ್ಯಾಮಸುಂದರ್ ಭಟ್, ಎಂಡೋಕ್ರ್ಯನೊಲೊಜಿ ವಿಭಾಗ ಮುಖ್ಯಸ್ಥರಾದ ಡಾ. ಸಹನಾ ಶೆಟ್ಟಿ ಜಂಟಿಯಾಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಶರತ್ ರಾವ್, ಆಸ್ಟಿಯೊಪೊರೋಸಿಸ್ ದಿನವನ್ನು ವ್ಯಕ್ತಿಯ ಮೂಳೆ ಆರೋಗ್ಯದ ಮೇಲೆ ತೀವ್ರವಾಗಿ ಪರಿಣಾಮ ಬೀರುವ ರೋಗದ ಬಗ್ಗೆ ಜಾಗೃತಿ ಮೂಡಿಸಲು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ವೈದ್ಯಕೀಯ ಸ್ಥಿತಿಯು ವ್ಯಕ್ತಿಯ ಮೂಳೆಗಳನ್ನು ಸಾಕಷ್ಟು ದುರ್ಬಲಗೊಳಿಸುತ್ತದೆ. ಅಂಕಿ ಅಂಶಗಳ ಪ್ರಕಾರ, 50 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿ ಮೂರು ಮಹಿಳೆಯರಲ್ಲಿ ಒಬ್ಬರು ಆಸ್ಟಿಯೊಪೊರೊಟಿಕ್ ಮುರಿತದಿಂದ ಬಳಲುತ್ತಿದ್ದಾರೆ. ಐದು ಪುರುಷರಲ್ಲಿ ಒಬ್ಬರು ಇದೇ ಅಪಾಯವನ್ನು ಎದುರಿಸುತ್ತಾರೆ. ಆದರೆ ಕೇವಲ 20 ಪ್ರತಿಶತದಷ್ಟು ಆಸ್ಟಿಯೊಪೊರೋಸಿಸ್ ರೋಗಿಗಳು ಮಾತ್ರ ಸರಿಯಾದ ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆಯುತ್ತಿರುವ ಅದೃಷ್ಟಶಾಲಿಗರಾಗಿದ್ದರೆ ಎಂದರು.
ಡಾ.ಅವಿನಾಶ್ ಶೆಟ್ಟಿ ಮಾತನಾಡಿ, ಆಸ್ಟಿಯೊಪೊರೋಸಿಸ್ ರೋಗ, ಅದರ ಲಕ್ಷಣಗಳು, ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯ ಬಗ್ಗೆ ಜಾಗೃತಿ ಮೂಡಿಸಲು ಆಸ್ಟಿಯೊಪೊರೋಸಿಸ್ ದಿನವನ್ನು ಗುರುತಿಸಲಾಗಿದೆ. ಆರಂಭಿಕ ಹಂತದಲ್ಲಿ ಆಸ್ಟಿಯೊಪೊರೋಸಿಸ್ ರೋಗ ಪತ್ತೆಹಚ್ಚಲು ನಿಯಮಿತವಾಗಿ ಪರೀಕ್ಷೆಗೆ ಒಳಗಾಗುವ ಪ್ರಾಮುಖ್ಯತೆಯ ಬಗ್ಗೆ ಇದು ಜನರಿಗೆ ಶಿಕ್ಷಣ ನೀಡುತ್ತದೆ. ಇದರ ಅಂಗವಾಗಿ ಒಂದು ತಿಂಗಳ ಕಾಲ ಆಸ್ಟಿಯೊಪೊರೋಸಿಸ್ ರೋಗ ಪತ್ತೆಹಚ್ಚಲು ಶೇಕಡಾ 50 ರಿಯಾಯಿತಿಯಲ್ಲಿ ಮೂಳೆ ಸ್ಕ್ಯಾನಿಂಗ್ ಅನ್ನು ಮಾಡಲಾಗುವುದು ಎಂದರು.