ಉಡುಪಿ: ಕಿತ್ತೂರು ರಾಣಿ ಚೆನ್ನಮ್ಮನ ಶೌರ್ಯ ಮತ್ತು ದಿಟ್ಟತನ ಇಂದಿನ ಸಮಾಜದಲ್ಲಿ ಮಹಿಳೆಯರಿಗೆ ಮಾದರಿಯಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹೇಳಿದರು.
ಅವರು ಇಂದು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯಲ್ಲಿ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಸಮಾಜದ ಒಳಿತಿಗಾಗಿ ಹೋರಾಡಿದ ಧೀರ ಮಹಿಳೆ ರಾಣಿ ಚೆನ್ನಮ್ಮನ ತ್ಯಾಗ ಬಲಿದಾನವನ್ನು ಶ್ಲಾಘನೆ ಮಾಡುವ ಮೂಲಕ ಮಕ್ಕಳಲ್ಲಿ ಸಾಧನೆಯ ಛಲವನ್ನು ತುಂಬುಬೇಕು ಎಂದರು.
ಚಿತ್ರಕಲಾ ಮಂದಿರದ ನಿರಂಜನ್ ಮಾತನಾಡಿ ಕಿತ್ತೂರು ರಾಣಿ ಚೆನ್ನಮ್ಮ ಎಂದರೆ ಕಿರಿಯರಿಂದ ಹಿರಿಯರಿಗೆ ಸಂಚಲನ ಮೂಡಿಸುವಂತ ಅಪ್ರತಿಮ ವೀರ ಮಹಿಳೆ, ಕರ್ನಾಟಕದ ಹೆಮ್ಮೆ ಎಂದರು.
ಜಿಲ್ಲಾ ಪಂಚಾಯತ್ ನ ಉಪಕಾರ್ಯದರ್ಶಿ ಕಿರಣ ಪಡ್ನೇಕರ್, ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್, ಉಡುಪಿ ಜಿಲ್ಲೆಯ ಶರಣ ಸಾಹಿತ್ಯ ಪರಿಷತ್ತಿನ ಖಜಾಂಚಿ ಉಮಾಪತಿ, ಬಿ.ಸಿ.ಎಂ.ಇಲಾಖೆಯ ಉಪನಿರ್ದೇಶಕ ಜಗದೀಶ್ ಶೆಟ್ಟರ್, ಬಸವ ಸಮಿತಿ ಕಾರ್ಯದರ್ಶಿ ಸುರೇಶ್, ಪಶುಸಂಗೋಪನೆ ಇಲಾಖೆಯ ಅಧಿಕಾರಿ ಡಾ. ಪ್ರಶಾಂತ್ ಶೆಟ್ಟಿ, ಚಿತ್ರಕಲಾ ಮಂದಿರದ ಸದಸ್ಯರುಗಳಾದ ಮನೋಜ್, ಗೌತಮ್ ಹಾಗೂ ಮತ್ತಿತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.