ಮಣಿಪಾಲ: ಇಂಟರ್ನ್ಯಾಷನಲ್ ಸೊಸೈಟಿ ಆಫ್ ಬ್ಲಡ್ ಟ್ರಾನ್ಸ್ಫ್ಯೂಷನ್ (ಐಎಸ್.ಬಿಟಿ) ನ 37ನೇ ಇಂಟರ್ನ್ಯಾಷನಲ್ ಕಾಂಗ್ರೆಸ್ ನ ಉದ್ಘಾಟನಾ ಸಮಾರಂಭದಲ್ಲಿ ಕಸ್ತೂರ್ಬಾ ಆಸ್ಪತ್ರೆಯ ರಕ್ತ ಕೇಂದ್ರಕ್ಕೆ ಅಭಿವೃದ್ಧಿಶೀಲ ರಾಷ್ಟಗಳಿಗೆ ಕೊಡಲ್ಪಡುವ ಇಂಟರ್ನ್ಯಾಷನಲ್ ಸೊಸೈಟಿ ಆಫ್ ಬ್ಲಡ್ ಟ್ರಾನ್ಸ್ಫ್ಯೂಷನ್ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿದೆ.
ಈ ಅಂತಾರಾಷ್ಟ್ರೀಯ ಪ್ರಶಸ್ತಿಯು ನಮ್ಮ ಸಂಸ್ಥೆಗೆ ಮತ್ತೊಂದು ಗರಿಯಾಗಿದೆ ಎಂದು ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ ಶರತ್ ಕುಮಾರ್ ರಾವ್ ಹೇಳಿದ್ದಾರೆ. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ಸಿಜಿ ಮುತ್ತಣ್ಣ ಅವರು, ಅಗತ್ಯವಿರುವವರಿಗೆ ಗುಣಮಟ್ಟದ ರಕ್ತದ ಉತ್ಪನ್ನಗಳನ್ನು ಒದಗಿಸಲು ಹಗಲಿರುಳು ಶ್ರಮಿಸುತ್ತಿರುವ ರಕ್ತ ಕೇಂದ್ರದ ಸಿಬ್ಬಂದಿಗಳ ಪ್ರಾಮಾಣಿಕ ಮತ್ತು ಸಮರ್ಪಿತ ಸೇವೆಯನ್ನು ಶ್ಲಾಘಿಸಿದರು.
ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಅವರು, ಈ ಪ್ರಶಸ್ತಿ ಪಡೆಯುವಲ್ಲಿ ಶ್ರಮಿಸಿದ ಇಡೀ ತಂಡವನ್ನು ಅಭಿನಂದಿಸಿ, ಕಸ್ತೂರ್ಬಾ ಆಸ್ಪತ್ರೆಯ ರಕ್ತ ಕೇಂದ್ರವು ದೇಶದಲ್ಲಿ ರಕ್ತ ವರ್ಗಾವಣೆ ಪದ್ಧತಿಯನ್ನು ಬಲಪಡಿಸುವಲ್ಲಿ ನೀಡಿದ ಮಹತ್ವದ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದರು.
ಪ್ರತಿಷ್ಠಿತ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಿದ ರಕ್ತ ಕೇಂದ್ರದ ನಿರ್ದೇಶಕಿ ಡಾ. ಶಮೀ ಶಾಸ್ತ್ರಿ ಅವರು, ನಮ್ಮ ಕೇಂದ್ರದ ರಕ್ತ ಸಂಗ್ರಹಣೆ, ಸಂಸ್ಕರಣೆ, ಪರೀಕ್ಷಾ ವಿಧಾನಗಳು ಮತ್ತು ಕೇಂದ್ರದಲ್ಲಿ ಪಾಲಿಸುವ ಗುಣಮಟ್ಟದ ವ್ಯವಸ್ಥೆಯನ್ನು ಮೌಲ್ಯಮಾಪನಕ್ಕೆ ಪರಿಗಣಿಸಲಾಗಿದೆ. ಅಲ್ಲದೇ ವಿಭಾಗದ ಶೈಕ್ಷಣಿಕ, ತರಬೇತಿ ಚಟುವಟಿಕೆಗಳು, ಪ್ರಕಟಣೆಗಳು, ಪ್ರಸ್ತುತಿಗಳು, ಪ್ರಾದೇಶಿಕ ಮತ್ತು ಜಾಗತಿಕ ಸಹಯೋಗಗಳು ಮತ್ತು ಸಂಶೋಧನಾ ಚಟುವಟಿಕೆಗಳನ್ನು ಸಹ ಗಣನೆಗೆ ತೆಗೆದುಕೊಂಡು ಈ ಪ್ರಶಸ್ತಿ ನೀಡಲಾಗಿದೆ ಎಂದು ಹೇಳಿದರು.