ಭೂಮಿಯನ್ನು ಹಸಿರಾಗಿಸಲು ಯುವಕರ ತಂಡವೊಂದು ಕಳೆದ 14 ವರ್ಷಗಳಿಂದ ಸದ್ದಿಲ್ಲದೆ ಕರ್ತವ್ಯನಿಷ್ಠೆಯಿಂದ ಕೃಷಿ ಸೇವೆ ಸಲ್ಲಿಸುವ ಮೂಲಕ ಇತರ ಯುವ ಸಂಘ ಸಂಸ್ಥೆಗಳಿಗೂ ಮಾದರಿಯಾಗಿದೆ. ಆಧುನಿಕತೆಯ ಪ್ರವಾಹದಿಂದ ಬಹುತೇಕ ಯುವಕರು ಕೃಷಿಯ ಬಗ್ಗೆ ನಿರ್ಲಕ್ಷ್ಯ ಧೋರಣೆ ಹೊಂದಿರುವ ಕಾಲಘಟ್ಟದಲ್ಲಿ ಕರಂಬಳ್ಳಿ ಫ್ರೆಂಡ್ಸ್ (ರಿ.) ಪ್ರತಿ ವರ್ಷ ಜಿಲ್ಲೆಯ ಮೂಲೆ ಮೂಲೆಗಳಿಂದ ಯುವಜನರನ್ನು ಕೃಷಿಯತ್ತ ಆಕರ್ಷಿಸುತ್ತಿದೆ. ನೇಜಿ ನಾಟಿ ಕಾರ್ಯದ ಸೊಬಗನ್ನು ಕಣ್ತುಂಬಿಕೊಳ್ಳಲೆಂದೇ ಪ್ರತಿ ವರ್ಷ ಕೃಷಿ ಪ್ರಿಯರು ಕರಂಬಳ್ಳಿಗೆ ಬಂದು ಇವರ ಶಿಸ್ತುಬದ್ಧ ನಾಟಿ ಕಾರ್ಯವನ್ನು ಆಸ್ವಾದಿಸಿ ಕೃಷಿಯ ಬಗ್ಗೆ ಅತೀವ ಆಸಕ್ತಿ ಬೆಳೆಸಿಕೊಂಡು ಮರಳುತ್ತಾರೆ.
ಜುಲೈ 11 ರಂದು ಕರಂಬಳ್ಳಿ ಫ್ರೆಂಡ್ಸ್ ಇವರ 14 ನೇ ವರ್ಷದ ನಾಟಿ ಕಾರ್ಯವು ನಡೆಯಿತು. ಅಂದು ತುಳುನಾಡಿನ ಸೊಬಗು ಮರಳಿ ಪರಿಚಯಿಸುವ ಕಾರ್ಯವು ಅರ್ಥಪೂರ್ಣವಾಗಿ ನಡೆಯಿತು. ಯುವಜನರಿಗೆ ಕೃಷಿಯ ಬಗ್ಗೆ ಆಸಕ್ತಿ ಹುಟ್ಟಿಸಲು ನಮ್ಮ ತಂಡದ ಕೃಷಿ ಸೇವೆ ಮುನ್ನುಡಿ ಬರೆದಿದೆ ಎಂಬುದು ಸಂತೋಷದ ಸಂಗತಿ ಎಂದು ಕರಂಬಳ್ಳಿ ಫ್ರೆಂಡ್ಸ್ ಅಧ್ಯಕ್ಷ ಗಿರಿಧರ ಆಚಾರ್ಯ ಕರಂಬಳ್ಳಿ ಹೇಳಿದರು. ‘ಉಡುಪಿ ಬುಲೆಟಿನ್’ ಜೊತೆಗೆ ಮಾತನಾಡಿದ ಅವರು, ತಂಡದ ಸದಸ್ಯರು ಸ್ವ-ಇಚ್ಛೆಯಿಂದ ಈ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಯುವಜನರಿಗೆ ನಾಟಿ ಮಾಡುವುದು ಹೇಗೆ ಎಂಬ ಜ್ಞಾನ ಇಲ್ಲಿಗೆ ಬಂದ ನಂತರ ತಿಳಿದಿದೆ. ಕೃಷಿ ಕಾರ್ಯಕ್ಕೆ ಶಾಸಕ ಕೆ. ರಘುಪತಿ ಭಟ್ ಮಾರ್ಗದರ್ಶನ ನೀಡುವ ಮೂಲಕ ನಿರಂತರ ಪ್ರೋತ್ಸಾಹ ನೀಡುತ್ತಾರೆ. ಒಮ್ಮೆ ಇಲ್ಲಿಗೆ ಭೇಟಿ ನೀಡಿದವರು ಪ್ರತಿ ವರ್ಷವೂ ಕೃಷಿ ಸೇವೆಯಲ್ಲಿ ಭಾಗವಹಿಸುತ್ತಾರೆ. 14 ವರ್ಷಗಳ ಹಿಂದೆ ನಮ್ಮ ತಂಡವು ಕೃಷಿ ಸೇವೆ ಮಾಡುವ ನಿರ್ಧಾರ ಕೈಗೊಂಡು ಇಲ್ಲಿಯವರೆಗೆ ಎಲ್ಲರ ಸಹಕಾರದಿಂದ ಅರ್ಥಪೂರ್ಣವಾಗಿ ನಡೆಯುತ್ತಿದೆ ಎಂದರು.
ಗೌರವ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ, ಕಾರ್ಯದರ್ಶಿ ಗಿರೀಶ್ ಕೆ., ಕೋಶಾಧಿಕಾರಿ ಶಶಿಧರ್ ಆಚಾರ್ಯ ಹಾಗೂ ಸರ್ವ ಸದಸ್ಯರು ಭಾನುವಾರ ನಡೆದ 14ನೇ ವರ್ಷದ ನಾಟಿ ಕಾರ್ಯದಲ್ಲಿ ಭಾಗವಹಿಸಿದ್ದರು.