ಮೂಡಬಿದಿರೆ, ಮಾ.5: ದೇಶದ ಪ್ರತಿಯೊಬ್ಬ ನಾಗರಿಕನಿಗೂ ತನಗಾದ ಅನ್ಯಾಯದ ವಿರುದ್ಧ ನ್ಯಾಯ ಪಡೆದುಕೊಳ್ಳುವ ಅವಕಾಶವನ್ನು ನಮ್ಮ ಸಂವಿಧಾನ ನೀಡಿದೆ. ಅದನ್ನು ಸರಿಯಾದ ಮಾರ್ಗದಲ್ಲಿ ಪಡೆದುಕೊಳ್ಳಲು ಜ್ಞಾನದ ಕೊರತೆ ನಮ್ಮ ಜನರಲ್ಲಿದೆ ಎಂದು ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ್ ಶ್ಯಾನುಭಾಗ್ ಹೇಳಿದರು. ಆಳ್ವಾಸ್‌ನ ರೊಸ್ಟ್ರಮ್ ಸ್ಪೀರ‍್ಸ್ ಕ್ಲಬ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತರ್ತು ಪರಿಸ್ಥಿತಿ ಸಂದರ್ಭದಲ್ಲಿ ಯಾವುದೇ ತಪ್ಪು ಮಾಡದೇ ಜೈಲು ಶಿಕ್ಷೆ ಅನುಭಸುತ್ತಿರುವಾಗ ಸಂವಿಧಾನ, ಕಾನೂನು ಹಾಗೂ ಹಕ್ಕುಗಳ ಕುರಿತು ಅರಿತುಕೊಳ್ಳುವಂತಾಯಿತು. ಮುಂದೆ ಅದೇ ಹಿನ್ನಲೆ ಶೋಷಿತರ ಕೂಗಿಗೆ ಧ್ವನಿಯಾಗಲು ನೆರವಾಯಿತು ಎಂದರು. ಪ್ರತಿಯೊಂದು ನೌಕರರ ಹಿತರಕ್ಷಣೆಗೂ ಒಂದೊಂದು ಸಂಘಟನೆಗಳಿವೆ. ಆದರೆ ಜನಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸಲು ಯಾವುದೇ ಅಧಿಕೃತ ವೇದಿಕೆಗಳಿಲ್ಲ. ಆದುರಿಂದ ಪ್ರತಿಯೊಬ್ಬರೂ ಕಾನೂನಿನ ಜ್ಞಾನ ಪಡೆದು ಹೋರಾಟ ಮಾಡಿದರೆ ಪ್ರಜಾತ್ರಭುತ್ವದ ಅರ್ಥ ನಿಜವಾಗಿ ಸಾಕಾರಗೊಳ್ಳಲಿದೆ ಎಂದು ತಿಳಿಸಿದರು.
ನಾಗರಿಕರ ಹಕ್ಕು ಹಾಗೂ ಹಿತರಕ್ಷಣೆಗೆ ಜನಜಾಗೃತಿಯಲ್ಲದೆ ಅನ್ಯ ಮಾರ್ಗಗಳಿಲ್ಲ. ಕಾನೂನು , ಕಾಯ್ದೆಗಳ ಕುರಿತು ಜನಸಾಮಾನ್ಯನಲ್ಲಿ ಸಾಕಷ್ಟು ಮಾಹಿತಿ ಇಲ್ಲ. ಈ ಹಿನ್ನಲೆಯಲ್ಲಿ ತನ್ನ 43 ವರ್ಷಗಳ ಸೇವೆಯಲ್ಲಿ 40 ಸಾವಿರಕ್ಕೂ ಅಧಿಕ ದೂರುಗಳನ್ನು ಪರಿಹರಿಸಿ, ೪ ಸಾವಿರಕ್ಕೂ ಮಿಕ್ಕ ಅಂಕಣಗಳು, ೬೦೦ರಷ್ಟು ಕಾರ‍್ಯಗಾರಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇನೆ ಎಂದರು. 15 ರೂ ತಿಂಗಳ ಸಂಬಳದಲ್ಲಿ ಸುಮಾರು 42 ವರ್ಷಗಳ ಕಾಲ ಇಡೀ ಪ್ರಪಂಚದಲ್ಲಿ ಅತೀ ಕಡಿಮೆ ಸಂಬಳಕ್ಕೆ ಸರ್ಕಾರಿ ಶಾಲೆಯಲ್ಲಿ ಶೌಚಗೃಹ ತೊಳೆಯುವ ಕೆಲಸ ಮಾಡಿದ ಅಕ್ಕು ಮತ್ತು ಲೀಲಾರವರಿಗೆ ತಲಾ 27 ಲಕ್ಷ ರೂಪಾಯಿ ಪರಿಹಾರ ದೊರಕಿಸಿದ ಪರಿಯನ್ನು ವಿವರಿಸಿದ ಅವರು, ಈ ಸಾಹಸಗಾಥೆಯ ಕುರಿತು ಫ್ರಾನ್ಸ್, ರಷ್ಯಾ, ಅಮೇರಿಕಾ, ಇಂಗ್ಲೆಂಡ್ ದೇಶದ ಜನರಿಗೆ ಮಾಹಿತಿ ಇದ್ದರೂ, ಅಲ್ಲಿನ ಮಾಧ್ಯಮಗಳು ಪ್ರಕಟಿಸಿದರೂ, ನಮ್ಮ ದೇಶ, ರಾಜ್ಯ ಹಾಗೂ ಊರಿನ ಹೆಚ್ಚಿನ ಜನರಿಗೆ ಈ ಕುರಿತು ತಿಳಿದಿಲ್ಲದಿರುವುದು, ಬೇಸರದ ಸಂಗತಿ ಎಂದರು. ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಆಡಳಿತಾಧಿಕಾರಿ ಪ್ರೊ. ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಂಕಿತ ಪರಾಡ್ಕರ್ ಕಾರ್ಯಕ್ರಮ ನಿರೂಪಿಸಿದರು.