ಉಡುಪಿ: ರಾಜ್ಯದಲ್ಲಿನ 150 ಐ.ಟಿ.ಐ ಕಾಲೇಜುಗಳನ್ನು 5000 ಕೋಟಿ ರೂ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮೆಲ್ದರ್ಜೆಗೆ ಏರಿಸಲಾಗುವುದು ಎಂದು ರಾಜ್ಯದ ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ವಿದ್ಯುನ್ಮಾನ ಐಟಿಬಿಟಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಶ್ವತ್ಥನಾರಾಯಣ್ ಹೇಳಿದರು.
ಅವರು ಇಂದು ಉಪ್ಪೂರಿನಲ್ಲಿ ಸರಕಾರಿ ಉಪಕರಣಾಗಾರ ಮತ್ತು ನೂತನ ತರಬೇತಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ 1200 ಸರಕಾರಿ ಮತ್ತು ಖಾಸಗಿ ಐ.ಟಿ.ಐ ಕಾಲೇಜುಗಳಿದ್ದು, ಸರಕಾರಿ ಐಟಿಐ ಕಾಲೇಜುಗಳಲ್ಲಿ ಕೌಶಲ್ಯತೆ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯದ 150 ಐಟಿಐ ಕಾಲೇಜುಗಳನ್ನು 5000 ಕೋಟಿ ರೂ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರವು ನಿರ್ಧರಿಸಿದ್ದು, 1000 ಕೋಟಿ ಸರ್ಕಾರವು ಉಳಿದ 4000 ಕೋಟಿಗಳನ್ನು ಟಾಟಾ ಟೆಕ್ನಾಲಜಿ ಕಾನ್ ಸಲ್ಟೋಯಿಂ ಮೂಲಕ ರಾಜ್ಯದ ಪ್ರತಿ ತಾಲೂಕಿನಲ್ಲಿ ಒಂದೊಂದು ಐ.ಟಿ.ಐ ಕಾಲೇಜುಗಳಲ್ಲಿ ವಿಶ್ವ ದರ್ಜೆಯು ಅಡ್ವಾನ್ಸ್ ಕೈಗಾರಿಕಾ 4.0 ತಂತ್ರಜ್ಞಾನ ತರಬೇತಿ ನೀಡಲು ಅಗತ್ಯವಿರುವ ವರ್ಕ್ಶಾಪ್, ಡಿಸೈನ್ ಲ್ಯಾಬ್ ಗಳ ನಿರ್ಮಾಣಕ್ಕೆ ಬಳಸಲಾಗುವುದು ಇದಕ್ಕಾಗಿ ಪ್ರತಿ ಕೇಂದ್ರಕ್ಕೆ 30 ಕೋಟಿ ರೂ ವೆಚ್ಚವಾಗಲಿದೆ. ಈ ಯೋಜನೆ ನವೆಂಬರ್ 2 ರಂದು ಉದ್ಘಾಟನೆಗೊಳ್ಳಲಿದೆ ಎಂದರು.
ಸರ್ಕಾರಿ ಉಪಕರಣಾಗಾರದಲ್ಲಿ ವಿದ್ಯಾರ್ಥಿಗಳಿಗೆ 21 ಶತಮಾನಕ್ಕೆ ಸಂಬಂಧಿಸಿದಂತೆ ಅತ್ಯಾಧುನಿಕ ಎಮರ್ಜಿಂಗ್ ತಂತ್ರಜ್ಞಾನವನ್ನು ಕಲಿಸಲಾಗುತ್ತಿದೆ. ಇದರಿಂದ 100% ಖಚಿತ ಉದ್ಯೋಗವಕಾಶಗಳಿದ್ದು, ಇಡೀ ವಿಶ್ವಕ್ಕೆ ಏರೊಸ್ಪೇಸ್ ಉಪಕರಣ ಉತ್ಪಾದನೆಯಲ್ಲಿ ಕರ್ನಾಟಕ ನಂ 1 ಸ್ಥಾನ ಪಡೆದಿದ್ದು, ಭಾರತ ಸರ್ಕಾರದಿಂದಲೇ 3 ಲಕ್ಷ ಕೋಟಿ ಮೊತ್ತದ ಆರ್ಡರ್ ದೊರೆತಿದೆ. ಇದಲ್ಲದೇ ಇತರೆ ಕಂಪೆನಿಗಳಿಂದ ಆರ್ಡರ್ ದೊರೆತಿದೆ. ಈ ಕಾರ್ಯಗಳನ್ನು ನಿರ್ವಹಿಸಲು ಕೌಶಲ್ಯಯುತ ವಿದ್ಯಾರ್ಥಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಆದ್ದರಿಂದ ವಿದ್ಯಾರ್ಥಿಗಳು ಜಿಟಿಟಿಸಿ ಕಾಲೇಜುಗಳಲ್ಲಿನ ತಂತ್ರಜ್ಞಾನ ಆಧರಿತ ಕೋರ್ಸ್ಗಳಿಗೆ ಸೇರ್ಪಡೆಯಾಗಬೇಕು ಎಂದರು.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ,ಉಡುಪಿ ಶಾಸಕ ಕೆ. ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಮೆಂಡನ್, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಪ್ಪೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣರಾಜ ಕೊಟ್ಯಾನ್, ಜಿಟಿಟಿಸಿ ಮೈಸೂರು ನ ವ್ಯವಸ್ಥಾಪಕ ಲಿಂಗರಾಜ ಸಣ್ಣಮನಿ, ಜಿಟಿಟಿಸಿ ಉಪ್ಪೂರು ನ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ, ಟೊಯೋಟಾ ಸಂಸ್ಥೆಯ ರೋಶನ್, ಪ್ರಾಂಶುಪಾಲ ಮಂಜುನಾಥ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.