ಜಿಲ್ಲೆಯ ಜನರಿಗೆ ಭಾನುವಾರ ಸೂರ್ಯನ ದರ್ಶನವೇ ಆಗಲಿಲ್ಲ, ಆ ರೀತಿ ಇತ್ತು ವರುಣನ ಆರ್ಭಟ! ದಿನವಿಡೀ ಧೋ ಎಂದು ಪೂರ್ಣವಿರಾಮ ಹಾಕದೆ ಸುರಿಯುತ್ತಿದ್ದ ಮಳೆಯ ಕಾರಣ ಜಿಲ್ಲೆಯಲ್ಲಿ ಚಳಿಯ ವಾತಾವರಣ ನಿರ್ಮಾಣವಾಗಿದೆ.
ಉಡುಪಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಶನಿವಾರ ನಡುರಾತ್ರಿಯಿಂದ ಆರಂಭವಾದ ಮಳೆ, ಬಳಿಕ ವೇಗ ಪಡೆದು ಭಾನುವಾರ ಮಧ್ಯಾಹ್ನದವರೆಗೂ ಸುರಿಯಿತು.
ಪಶ್ಚಿಮ ಘಟ್ಟ ಹಾಗೂ ತಪ್ಪಲಿನ ಪ್ರದೇಶಗಳಾದ ಆಗುಂಬೆ, ಸೋಮೇಶ್ವರ, ಹೆಬ್ರಿ, ಕಾರ್ಕಳ ಇತರೆ ಕಡೆಗಳಲ್ಲಿ ಕಳೆದ ಕೆಲವು ದಿನಗಳಿಂದ ವರ್ಷಧಾರೆಯಾಗುತ್ತಿರುವ ಹಿನ್ನಲೆಯಲ್ಲಿ ಕರಾವಳಿಯ ಬಹುತೇಕ ನದಿಗಳು ಉಕ್ಕಿ ಹರಿಯುತ್ತಿವೆ.
ಜನರ ವಾರಾಂತ್ಯದ ತಿರುಗಾಟಕ್ಕೆ ವರುಣ ಬ್ರೇಕ್ ಹಾಕಿದ್ದ ಕಾರಣ ನಗರದಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಪ್ರವಾಸಿ ಸ್ಥಳಗಳಲ್ಲಿ ಬೆರಳಣಿಕೆಯಷ್ಟು ಮಾತ್ರ ಪ್ರವಾಸಿಗರು ಇದ್ದದ್ದು ಕಂಡುಬಂತು. ಜಿಲ್ಲೆಯ ಧಾರ್ಮಿಕ ಕೇಂದ್ರಗಳಲ್ಲಿಯೂ ಭಕ್ತರ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು.
ಹವಾಮಾನ ಇಲಾಖೆ ಶನಿವಾರ ನೀಡಿದ ಮುನ್ಸೂಚನೆಯ ಪ್ರಕಾರ ರಾಜ್ಯದ ಕರಾವಳಿ ಜಿಲ್ಲೆಗಳ ಹಲವೆಡೆ ಜುಲಾಯಿ 22 ರವರೆಗೆ 115.6 ಮಿಮಿ-204.4 ಮಿಮಿ ನಷ್ಟು ಭಾರಿ ಮಳೆಯಾಗುವ ಸಾಧ್ಯತೆಯಿದೆ.