ಮೂಡುಬಿದಿರೆ, ನ.19: ಪ್ರಕೃತಿ ಚಿಕಿತ್ಸಾ ಪದ್ಧತಿಯು ಅತ್ಯುತ್ತಮ ಜೀವನವನ್ನು ನಡೆಸಲು ರಹದಾರಿಯಾಗಿದ್ದು ಇದರ ಮೂಲ ತತ್ವಗಳನ್ನು ಪಾಲಿಸುವುದರಿಂದ ಜೀವನ ಶೈಲಿ ಬದಲಾವಣೆಯಾಗುವುದಲ್ಲದೇ ಯೋಗಭ್ಯಾಸಗಳಿಂದ ಆಯುಷ್ಯ ವೃದ್ಧಿಯಾಗುತ್ತದೆ ಎಂದು ಪ್ರಕೃತಿ ಚಿಕಿತ್ಸಾ ತಜ್ಞ ಡಾ. ಮಹಮ್ಮದ್ ರಫೀಕ್ ತಿಳಿಸಿದರು. ಅವರು ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಕಾಲೇಜು ಆಯೋಜಿಸಿದ್ದ 7ನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನದ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಪ್ರಕೃತಿ ಚಿಕಿತ್ಸೆ ಮತ್ತು ಯೋಗವನ್ನು ಸರಿಯಾಗಿ ಪಾಲಿಸುವುದರಿಂದ ಮಾನಸಿಕ ಸ್ಥಿತಿಗತಿಗಳನ್ನು ಸಮತೋಲನದಲ್ಲಿಟ್ಟುಕೊಳ್ಳಬಹುದು. ಆ ಮೂಲಕ ಎಲ್ಲಾ ವರ್ಗದ ಮತ್ತು ವಯೋಮಾನದವರಿಗೂ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಗ್ರೀಷ್ಮಾ ವಿವೇಕ್ ಆಳ್ವ, ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಶಿಕ್ಷಣವನ್ನು ಪ್ರತಿಯೊಬ್ಬರು ಅಳವಡಿಸಿಕೊಂಡಲ್ಲಿ ಜೀವನವನ್ನು ಅನುಭವಿಸಲು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಪ್ರಥಮ ವರ್ಷದ ವಿದ್ಯಾರ್ಥಿ ಯೋಗೀಶ್ವರನ್ ಕಾರ್ಯಕ್ರಮ ನಿರೂಪಿಸಿ, ಯೋಗ ವಿಭಾಗದ ಮುಖ್ಯಸ್ಥೆ ಡಾ ಅರ್ಚನಾ ಸ್ವಾಗತಿಸಿ, ಡಾನಿಯ ಹಾಗೂ ತಂಡದವರು ಪ್ರಾರ್ಥಸಿ, ಡಾ ಅಕ್ಷತಾ ಧನ್ಯವಾದ ಸಮರ್ಪಿಸಿದರು. ಪ್ರಕೃತಿ ಚಿಕಿತ್ಸಾ ದಿನಾಚರಣೆಯ ಅಂಗವಾಗಿ ನಡೆದ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಆಳ್ವಾಸ್ ಹೋಮಿಯೋಪತಿ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಹೆರಾಲ್ಡ್ ರೋಷನ್ ಪಿಂಟೊ, ಯೋಗ ವಿಭಾಗದ ಮುಖ್ಯಸ್ಥೆ ಡಾ ಅರ್ಚನಾ ಇದ್ದರು.