ಉಡುಪಿ: ನಗರದ ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣ, ಸರ್ವಿಸ್ ಬಸ್ಸು ನಿಲ್ದಾಣ, ಸಿಟಿ ಬಸ್ಸು ನಿಲ್ದಾಣಗಳಲ್ಲಿ ಕುಡುಕರ ಹಾವಳಿ ಮಿತಿ ಮೀರಿದ್ದು, ಕುಡುಕರ ಉಪಟಳದಿಂದ ಉಡುಪಿ ಜಿಲ್ಲೆಗೆ ಬರುವ ಯಾತ್ರಾರ್ಥಿಗಳು, ಪ್ರವಾಸಿಗರು, ಬಸ್ಸು ನಿಲ್ದಾಣಗಳಲ್ಲಿ ವಿಶ್ರಮಿಸಲಾಗದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಎಲ್ಲಿಂದರಲ್ಲಿ ಉಗಿದು ಬಸ್ಸು ನಿಲ್ದಾಣದ ಅಂದವನ್ನು ಹಾಳುಗೆಡವಿದ್ದಾರೆ. ಕುಡುಕರು ಪರಿಸರದಲ್ಲಿ ಮಲ ಮೂತ್ರವಿಸರ್ಜನೆ ಮಾಡುವುದರಿಂದ ಗಬ್ಬು ವಾಸನೆ ಹರಡಿದ್ದು, ರೋಗವಾಹಕ ಸೊಳ್ಳೆಗಳ ಉತ್ಪತ್ತಿಯ ತಾಣವಾಗಿ ಮಾರ್ಪಟ್ಟಿದೆ.
ಕೊರೊನಾ ತುರ್ತು ಸಂದರ್ಭದಲ್ಲಿ ಯಾರೊಬ್ಬರೂ ಮಾಸ್ಕ್ ಧರಿಸುವುದು ಕಂಡು ಬರುವುದಿಲ್ಲ. ಪ್ರಯಾಣಿಕರ ಪರ್ಸು, ಮೊಬೈಲ್ ಕಳ್ಳತನ ಪ್ರಕರಣಗಳು ನಿತ್ಯವು ಇಲ್ಲಿ ನಡೆಯುತ್ತಿರುವ ಬಗ್ಗೆಯೂ ದೂರುಗಳು ಕೇಳಿ ಬಂದಿವೆ. ನಗರಸಭೆ ತಕ್ಷಣ ಬಸ್ಸು ನಿಲ್ದಾಣದಲ್ಲಿ ಕಾವಲುಗಾರರನ್ನು ನೇಮಿಸಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಆಗ್ರಹಿಸಿದ್ದಾರೆ.