ಕಲ್ಯಾಣಪುರ, ಡಿ.30: (ಉಡುಪಿ ಬುಲೆಟಿನ್ ವರದಿ) ಗೌಡ ಸಾರಸ್ವತ ಬ್ರಾಹ್ಮಣ ಸಭಾ ಕಲ್ಯಾಣಪುರ ಇದರ 36ನೇ ವಾರ್ಷಿಕೋತ್ಸವ ಶನಿವಾರ ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನದ ಕಲಾಮಂದಿರದಲ್ಲಿ ನಡೆಯಿತು.
ಸಮಯಪ್ರಜ್ಞೆಗೆ ಹೆಚ್ಚಿನ ಆದ್ಯತೆ ನೀಡಿ-ಕೆ.ಎ.ಪಿ.ಆರ್. ಕಿಣಿ: ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಎ.ಪಿ.ಆರ್. ಕಿಣಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಪ್ರತಿಯೊಬ್ಬರೂ ಜೀವನದಲ್ಲಿ ಸಮಯಪ್ರಜ್ಞೆಗೆ ಹೆಚ್ಚಿನ ಆದ್ಯತೆ ನೀಡಿ ನಂಬಿಕೆಗೆ ಚ್ಯುತಿ ಬರದಂತೆ ನಡೆದುಕೊಳ್ಳಬೇಕು. ದೇವಳದ ಪ್ರತಿಯೊಂದು ಕಾರ್ಯಚಟುವಟಿಕೆಗಳಲ್ಲಿ ಜಿ.ಎಸ್.ಬಿ. ಸ್ವಯಂಸೇವಕರ ಭಾಗವಹಿಸುವಿಕೆ ಪ್ರಶಂಸನೀಯ. ದೇವಳದ ಜೀರ್ಣೋದ್ಧಾರ ಕಾರ್ಯಕ್ಕೆ ಪ್ರತಿಯೊಬ್ಬರೂ ಕ್ರಿಯಾಶೀಲ ಸಹಕಾರ ನೀಡಬೇಕು ಎಂದರು.
ಕ್ರಿಯಾಶೀಲ ವ್ಯಕ್ತಿತ್ವ ನಿರ್ಮಿಸಿ-ಲಕ್ಷ್ಮೀನಾರಾಯಣ ನಾಯಕ್: ಸನ್ಮಾನ ಸ್ವೀಕರಿಸಿ ಮಾತನಾಡಿದ ಕರಾವಳಿಯ ಖ್ಯಾತ ಅಂಚೆ ಚೀಟಿ ಮತ್ತು ನಾಣ್ಯ ಸಂಗ್ರಹಕಾರ ಲಕ್ಷ್ಮೀನಾರಾಯಣ ನಾಯಕ್, ವಿದ್ಯಾರ್ಥಿಗಳು ಕಲಿಕೆಯ ಸಂದರ್ಭದಲ್ಲಿ ಅಂಚೆಚೀಟಿ, ನಾಣ್ಯ ಸಂಗ್ರಹದಂತಹ ಹವ್ಯಾಸಗಳನ್ನು ಮೈಗೂಡಿಸಿಕೊಂಡಲ್ಲಿ ಕ್ರಿಯಾಶೀಲ ವ್ಯಕ್ತಿತ್ವ ನಿರ್ಮಾಣ ಸಾಧ್ಯ ಎಂದರು.
ಜಿ.ಎಸ್.ಬಿ ಸಭಾ ಸಮಾಜಮುಖಿ ಕಾರ್ಯ ಶ್ಲಾಘನೀಯ-ವೆಂಕಟೇಶ ಪೈ: ಸ್ಪಂದನಾ ಸೇವಾ ಸಂಸ್ಥೆ ಬೆಂಗಳೂರು ಅಧ್ಯಕ್ಷರಾದ ವೆಂಕಟೇಶ ಪೈ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ, ಜಿ.ಎಸ್.ಬಿ ಸಭಾ ಮತ್ತು ಸ್ಪಂದನಾ ಸೇವಾ ಸಂಸ್ಥೆಗಳ ಬಾಂಧವ್ಯ ಮತ್ತು ಜಂಟಿಯಾಗಿ ನಡೆಸಿದ ಕಾರ್ಯಕ್ರಮಗಳ ಮಾಹಿತಿ ನೀಡಿ ಜಿ.ಎಸ್.ಬಿ ಸಭಾ ಇದರ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು.
ಕಲ್ಯಾಣಪುರದ ಡಾ. ಟಿ.ಎಂ.ಎ ಪೈ ಪ್ರೌಢಶಾಲೆಯ ಶಾಲಾ ಸಂಚಾಲಕಿ ಸುಮನ ಎಸ್ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿ.ಎಸ್.ಬಿ ಸಭಾ ಅಧ್ಯಕ್ಷರಾದ ಸಂತೋಷ್ ಕಾಮತ್ ಸ್ವಾಗತಿಸಿ ವಂದಿಸಿದರು. ಲಕ್ಷ್ಮೀಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.
ಕೋಶಾಧಿಕಾರಿ ಪ್ರವೀಣ್ ಶೆಣೈ ವಾರ್ಷಿಕ ವರದಿ ವಾಚಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶೈಕ್ಷಣಿಕ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ನಂತರ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.