ಮಣಿಪಾಲ, ಜುಲೈ 3: ಲೇಖಕ, ಪತ್ರಕರ್ತ ಸತೀಶ್ ಚಪ್ಪರಿಕೆ ಅವರ ಕಾದಂಬರಿ ‘ಫಾಂದ್ರುಕ್’ ನ್ನು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಶ್ರಯದಲ್ಲಿ ಬಿಡುಗಡೆ ಮಾಡಲಾಯಿತು. ಕನ್ನಡ ಸಾಹಿತ್ಯ ಲೋಕಕ್ಕೆ ವಿಭಿನ್ನ ಕೊಡುಗೆಯಾಗಿರುವ ಈ ಕಾದಂಬರಿಯು ಕಾರ್ಪೊರೇಟ್ ಜಗತ್ತು ಮತ್ತು ಭೌಗೋಳಿಕ ರಾಜಕೀಯ ಸನ್ನಿವೇಶದೊಂದಿಗೆ ಸಂವಾದಿಸುತ್ತದೆ ಎಂದು ಬರಹಗಾರ ರಾಜಾರಾಮ್ ತಲ್ಲೂರ್ ಕಾದಂಬರಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.
ಕಾದಂಬರಿಯಲ್ಲಿ ಸಂಬಂಧಗಳ ಪರಿಶೋಧನೆಯೇ ಜೀವನದ ಅಂತಿಮ ಉದ್ದೇಶವಾಗಿದೆ ಎಂದು ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಹೇಳಿದರು. ಕಾದಂಬರಿಯಲ್ಲಿ ಪುರುಷ ಪಾತ್ರಕ್ಕಿಂತ ಮುಖ್ಯ ಸ್ತ್ರೀ ಪಾತ್ರವೇ ಪ್ರಬಲವಾಗಿದೆ ಎಂದು ಉಜಿರೆಯ ಎಸ್. ಡಿ.ಎಂ ಕಾಲೇಜಿನ ಪ್ರಾಧ್ಯಾಪಕ ಮತ್ತು ವಿಮರ್ಶಕ ಪ್ರೊ.ರಾಜಶೇಖರ್ ಹೇಳಿದರು. ಫಾಂದ್ರುಕ್ ಎಂಬ ನೇಪಾಳದ ಹಳ್ಳಿಯ ಹೆಸರು ಕಾದಂಬರಿಯಲ್ಲಿ ರೂಪಕವಾಗುತ್ತದೆ ಎಂದು ಎಂಐಸಿಯ ಪ್ರೊ.ಶ್ರೀರಾಜ್ ಗುಡಿ ಹೇಳಿದರು.
ಚಪ್ಪರಿಕೆ ಅವರು ತಮ್ಮ ಪ್ರಯಾಣ ಮತ್ತು ಅವರ ಕಾದಂಬರಿ ಬರವಣಿಗೆಯ ಪ್ರಕ್ರಿಯೆಯನ್ನು ವಿವರಿಸುತ್ತಾ, ಈ ಕಾದಂಬರಿ ನನ್ನ ಜಾಗೃತ ಆಲೋಚನೆಯನ್ನು ಮೀರಿದೆ ಎಂದು ಹೇಳಿದರು. ಚಪ್ಪರಿಕೆಯವರಿಗೆ ತಮ್ಮ ಆರಂಭಿಕ ವರ್ಷಗಳಲ್ಲಿ ಶಿಕ್ಷಕರಾಗಿದ್ದ ಜನಾರ್ದನ ಮರವಂತೆ ಮಾತನಾಡಿ ಅವರಿಂದ ಇನ್ನಷ್ಟು ಇಂತಹ ಕೆಲಸಗಳನ್ನು ನಿರೀಕ್ಷಿಸುತ್ತಿದ್ದೇವೆ ಎಂದರು.