ಉಳ್ಳಾಲ ತಾಲೂಕು ಫಜೀರು ಗ್ರಾಮದ ಸಾಂಬಾರತೋಟ ಪರಿಸರದ ಜನರು ಎದುರಿಸುತ್ತಿರುವ ನೀರಿನ ಸಮಸ್ಯೆ ಒಂದು ಕಡೆಯಾದರೆ, ಸುಮಾರು ಏಳೆಂಟು ತಿಂಗಳುಗಳಿಂದ ಇಲ್ಲಿರುವ ನೀರಿನಲ್ಲಿ ತೈಲ ಅಂಶ ಮಿಶ್ರಣವಿರುವುದು ಇನ್ನೊಂದು ಸಮಸ್ಯೆಯಾಗಿದೆ. ಈ ಪರಿಸರದಲ್ಲಿ ನೂರಾರು ಮನೆಗಳಿದ್ದು ಏಳು ತಿಂಗಳುಗಳಿಂದ ಹತ್ತು ಕೊಳವೆ ಬಾವಿ ಹಾಗೂ ನಾಲ್ಕೈದು ಬಾವಿಗಳ ನೀರಿನಲ್ಲಿ ಕಳೆದ ಮೂರು ತಿಂಗಳುಗಳಿಂದ ಇಂಧನದ ವಾಸನೆ ಬರುತ್ತಿದ್ದೆ. ಇದರಿಂದ ಸ್ಥಳೀಯ ನಾಗರಿಕರು ಗ್ರಾಮ ಪಂಚಾಯತ್ ಗೆ ದೂರು ನೀಡಿದ್ದು, ಕ್ಷೇತ್ರದ ಶಾಸಕರಿಗೂ ದೂರು ನೀಡುವುದರಿಂದ ಶಾಸಕರ ನಿರ್ದೇಶನದಂತೆ ಉಳ್ಳಾಲ ತಾಲೂಕು ತಹಶೀಲ್ದಾರರು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರು, ಗ್ರಾಮದ ಆರೋಗ್ಯ ಅಧಿಕಾರಿಗಳು ಮತ್ತು ಇತರ ಅಧಿಕಾರಿಗಳು ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೊಳವೆ ಬಾವಿಗಳ ನೀರನ್ನು ಈಗಾಗಲೇ ಗುಣಮಟ್ಟ ಪರೀಕ್ಷೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರಿನ ಲ್ಯಾಬ್ ಗೆ ಕಳುಹಿಸಿ ಕೊಟ್ಟಿರುತ್ತಾರೆ. ಅದರ ವರದಿ ಬಂದ ನಂತರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.
ಕೊಳವೆಬಾವಿ ಮತ್ತು ಬಾವಿ ನೀರಿನಲ್ಲಿ ಇಂಧನ ಮಿಶ್ರಣ ಇರುವುದರಿಂದ ಪಂಚಾಯತ್ ಪೈಪ್ ಲೈನ್ ನೀರನ್ನು ಬಳಸುವಂತೆ ಗ್ರಾಮಸ್ಥರಿಗೆ ಸೂಚಿಸಲಾಗಿತ್ತು ಆದರೆ ಹಲವಾರು ಮನೆಯಲ್ಲಿ ಪೈಪ್ ಲೈನ್ ಸಂಪರ್ಕವಿಲ್ಲದಿರುವುದರಿಂದ ಜನರು ನೀರಿನ ಸಮಸ್ಯೆಯಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈಗಾಗಲೇ ಬೆಂಗಳೂರಿನ ಲ್ಯಾಬಿನಿಂದ ನೀರಿನ ಗುಣಮಟ್ಟ ಪರೀಕ್ಷೆಯ ವರದಿ ಬಂದಿದ್ದು ಅದರಂತೆ ನೀರಿನಲ್ಲಿ ಟರ್ಬಿಡಿಟಿ ಕೆಮಿಕಲ್ ಹಾಗೂ ಆಕ್ಸಿಜನ್ ಡಿಮಾಂಡ್ ಪ್ರಮಾಣಕ್ಕಿಂತ ಹೆಚ್ಚಿದ್ದು ಪ್ರಸ್ತುತ ನೀರು ಕುಡಿಯಲು ಯೋಗ್ಯವಲ್ಲವೆಂದು ವರದಿಯಿಂದ ತಿಳಿದುಬಂದಿದೆ. ಈ ಕುರಿತಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಇಲ್ಲಿನ ನಾಗರಿಕರಿಂದ ಬಂದ ದೂರನ್ನು ಪರಿಗಣಿಸಿ ಲ್ಯಾಬಿನ ವರದಿಯನ್ನು ಆಧರಿಸಿ ಗ್ರಾಮ ಪಂಚಾಯಿತಿಗೆ ನೋಟಿಸ್ ನೀಡಿದ್ದು ಪರಿಸರದ ನಾಗರಿಕರು ಇಂಧನ ಮಿಶ್ರಣ ನೀರನ್ನು ಬಳಸದಂತೆ ಸೂಚಿಸಿರುತ್ತಾರೆ ಹಾಗೂ ಮಂಗಳೂರಿನ ಇಂಡಿಯನ್ ಆಯಿಲ್ ಜನರಲ್ ಮ್ಯಾನೇಜರ್ ಅವರಿಗೆ ನೋಟಿಸು ನೀಡಿರುತ್ತಾರೆ. ತೈಲಾಂಶ ಕಂಡುಬಂದಿರುವ ಬಾವಿ, ಕೊಳವೆ ಬಾವಿಗಳ ಸಮೀಪ ಇರುವ ಪೆಟ್ರೋಲ್ ಪಂಪಿನ ತೈಲ ಸೋರಿಕೆಯ ಸಾಧ್ಯತೆ ಹಾಗೂ ಪೆಟ್ರೋಲ್ ಸಂಗ್ರಹದ ಟ್ಯಾಂಕಿನ ಸಮಗ್ರತೆಯ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕಾರಣದೊಂದಿಗೆ ಉತ್ತರಿಸುವಂತೆ ತಿಳಿಸಿದ್ದರು.
ತೈಲ ಕಂಪನಿಯು ಈವರೆಗೂ ಅದರ ವಿವರಣೆಯನ್ನು ನೀಡದೆ ದಿನ ದೂಡುತ್ತಿದೆ. ಈ ಸಮಸ್ಯೆಗೆ ಮುಖ್ಯ ಕಾರಣ ಇಲ್ಲಿರುವ ಸಮೀಪದ ಪೆಟ್ರೋಲ್ ಬಂಕ್ ಆಗಿರಬಹುದು. ಈ ಹಿಂದೆ ಇಂತದೇ ಸಮಸ್ಯೆ ದೇರಳಕಟ್ಟೆ ಪರಿಸರದಲ್ಲಿ ಎದುರಾಗಿದ್ದಾಗ ಅಲ್ಲಿನ ಸಮೀಪದ ಪೆಟ್ರೋಲ್ ಬಂಕಿನ ಟ್ಯಾಂಕನ್ನು ಬದಲಾಯಿಸಿ ಸಮಸ್ಯೆಯನ್ನು ಪರಿಹರಿಸಿದ್ದರು. ಅದೇ ರೀತಿ ಸಾಂಬಾರ ತೋಟದಲ್ಲಿಯೂ ಇಲ್ಲಿರುವ ಪೆಟ್ರೋಲ್ ಪಂಪಿನಿಂದಾಗಿ ಅಲ್ಲಿನ ಸ್ಥಳೀಯ ನಾಗರಿಕರು ಸಮಸ್ಯೆಗೆ ಒಳಗಾಗಿರುವುದು ಸ್ಪಷ್ಟವಾಗಿದೆ. ಆದ್ದರಿಂದ ಸಂಬಂಧಪಟ್ಟವರು ಆದಷ್ಟು ಬೇಗ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಿಕೊಡಬೇಕೆಂದು ಗ್ರಾಮಸ್ಥರ ಪರವಾಗಿ ಮನವಿ.
ಮಹಮ್ಮದ್ ಅಸ್ಗರ್, ನ್ಯಾಯವಾದಿ, ಕಾರ್ಯಕಾರಣಿ ಸದಸ್ಯರು,
ಮಂಗಳೂರು ವಕೀಲರ ಸಂಘ (ರಿ) ಮಂಗಳೂರು