ಮಂಗಳೂರು: ಹಿರಿಯ ಕಾಂಗ್ರೆಸ್ ನಾಯಕ ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ನಿಧನರಾದ ಸುದ್ಧಿ ತಿಳಿದು ತೀವ್ರ ಸಂತಾಪ ಸೂಚಿಸಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಪತ್ರ ಬರೆದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಆಸ್ಕರ್ ಪತ್ನಿ ಬ್ಲಾಸಂ ಫರ್ನಾಂಡಿಸ್ ಅವರಿಗೆ ಬರೆದ ಪತ್ರದಲ್ಲಿ, “ಆಸ್ಕರ್ ಅವರ ಸಾವಿನ ಸುದ್ಧಿ ತಿಳಿದು ಆಘಾತಕ್ಕೊಳಗಾಗಿದ್ದೇನೆ. ಕಠಿಣ ಪ್ರಯತ್ನ, ಸರಳ ವ್ಯಕ್ತಿತ್ವ ಹಾಗೂ ಕ್ರಿಯಾಶೀಲ ಗುಣಗಳಿಂದ ಅವರು ಕಾಂಗ್ರೆಸ್ ಪಕ್ಷದಲ್ಲಿ ಕರ್ನಾಟಕದ ಮೇರು ನಾಯಕರಾಗಿ ಪಕ್ಷ ಪ್ರಮುಖ ನಿರ್ಣಯ ಕೈಗೊಳ್ಳುವ ಸಂದರ್ಭದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ಐದು ಬಾರಿ ಲೋಕಸಭೆ ಹಾಗೂ ಎರಡು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಅವರ ಜನಪ್ರಿಯತೆಗೆ ಇದೇ ಸಾಕ್ಷಿ. ಅವರೊಬ್ಬ ಉತ್ತಮ ಆಡಳಿತಗಾರ ಹಾಗೂ ಅಪ್ರತಿಮ ನಾಯಕರಾಗಿದ್ದರು. ದೇಶಕ್ಕಾಗಿ ಅವರು ಸಲ್ಲಿಸಿದ ಸೇವೆ ಸದಾ ನೆನಪಿನಲ್ಲಿರಲಿದೆ” ಎಂದು ಡಾ. ಮನಮೋಹನ್ ಸಿಂಗ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.