ಕಾರ್ಕಳ: ಭಾರತ ಸರಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಉಡುಪಿ ಮತ್ತು ಯುವಕ ಮಂಡಲ (ರಿ.) ಸಾಣೂರು ಇದರ ವತಿಯಿಂದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 2020/21 ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 90 ಕ್ಕಿಂತ ಅಧಿಕ ಅಂಕ ಪಡೆದ ಸಾಣೂರು ಗ್ರಾಮದ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಮುರತಂಗಡಿ ಇಲ್ಲಿನ ವಿದ್ಯಾರ್ಥಿಗಳಿಗೆ ಗೌರವ ಅಭಿನಂದನಾ ಕಾರ್ಯಕ್ರಮ ಸಾಣೂರು ಯುವಕ ಮಂಡಲದ ಸಭಾಂಗಣದಲ್ಲಿ ಭಾನುವಾರ ನಡೆಯಿತು.
ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಮಾತನಾಡುತ್ತಾ, ಸಾಣೂರು ಯುವಕ ಮಂಡಲವು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮ ಉಡುಪಿ ಜಿಲ್ಲೆಗೆ ಮಾದರಿಯಾಗಿದೆ. ಇಂತಹ ಕಾರ್ಯಕ್ರಮಗಳಿಂದ ಉಳಿದ ವಿದ್ಯಾರ್ಥಿಗಳಿಗೆ ಹೆಚ್ಚು ಹೆಚ್ಚು ಅಂಕಗಳನ್ನು ಪಡೆಯಲು ಪ್ರೇರಣೆಯಾಗುತ್ತದೆ. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ದೇಶದ ಆಸ್ತಿ ಆಗಬೇಕು ಎಂದರು.
ಯುವಕ ಮಂಡಲದ ವಠಾರದಲ್ಲಿ ಸದಸ್ಯರೇ ಬೆಳೆದ ಕಾರ್ಕಳ ಬ್ರಾಂಡ್ ಆದ ಬಿಳಿ ಬೆಂಡೆಯ ತೋಟವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ ಸಾರ್ವಜನಿಕವಾಗಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಬಿಳಿ ಬೆಂಡೆ ಬೆಳೆದದ್ದು ತಾಲೂಕಿನಲ್ಲಿ ಸಾಣೂರು ಯುವಕ ಮಂಡಲ ಮಾತ್ರ ಎಂದು ಅಭಿನಂದಿಸಿದರು. ಮುಂದೆ ಎಲ್ಲಾ ಯುವಕ ಮಂಡಲಗಳು ಬಿಳಿ ಬೆಂಡೆ ಬೆಳೆಯುವ ಮೂಲಕ ಕಾರ್ಕಳ ಬ್ರಾಂಡ್ ನ್ನು ಬೆಂಬಲಿಸಬೇಕೆಂದು ಸಚಿವರು ಕರೆ ನೀಡಿದರು.
ಸಚಿವರಿಗೆ ಯುವಕ ಮಂಡಲದಲ್ಲಿ ಬೆಳೆದಂತ ಬಿಳಿ ಬೆಂಡೆಯ ಮೊದಲ ಫಲವನ್ನು ನೀಡಿ ಸ್ವಾಗತಿಸಲಾಯಿತು. ಸರಕಾರಿ ಪದವಿಪೂರ್ವ ಕಾಲೇಜು ಮುರತಂಗಡಿ ಇಲ್ಲಿಯ ಪ್ರಾಂಶುಪಾಲರಾದ ಸುಚೇತಾ ಕಾಮತ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಕಳ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲರಾದ ಮಂಜುನಾಥ ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ಯಾಮ ಶೆಟ್ಟಿ ಸಾಣೂರು, ನೆಹರು ಯುವ ಕೇಂದ್ರದ ಉಡುಪಿ ಜಿಲ್ಲಾ ಸಮನ್ವಯಾಧಿಕಾರಿಗಳಾದ ವಿಲ್ಫ್ರೆಡ್ ಡಿಸೋಜ, ವೇದಮೂರ್ತಿ ಶ್ರೀರಾಮ್ ಭಟ್, ಸುಜಿತ್ ರೈ, ಪ್ರಜ್ವಲ್ ಶೆಟ್ಟಿ, ಅಶೋಕ್ ಶೆಟ್ಟಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಜಾತ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಮಂಡಲದ ಅಧ್ಯಕ್ಷರಾದ ಪ್ರಸಾದ್ ಪೂಜಾರಿ ಸ್ವಾಗತಿಸಿ, ಮಂಡಲದ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ ವಿದ್ಯಾರ್ಥಿಗಳ ಅಭಿನಂದನಾ ಪಟ್ಟಿ ವಾಚಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಚಂದ್ರಹಾಸ ಪೂಜಾರಿ ವಂದನಾರ್ಪಣೆಗೈದರು. ಮಂಡಲದ ಕಾರ್ಯದರ್ಶಿ ಮೋಹನ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.