ಗಂಗೊಳ್ಳಿ: ಯಾವುದೇ ಸ್ಪರ್ಧೆಗಳಲ್ಲಿ ಭಾಗವಹಿಸುವಾಗ ಅದರ ನೀತಿ-ನಿಯಮಗಳನ್ನು ಸರಿಯಾಗಿ ಪಾಲಿಸಬೇಕು. ವಿಷಯ ಸಂಗ್ರಹಣೆಗಾಗಿ ವಿವಿಧ ಆಕರಗಳನ್ನು ಬಳಸಿಕೊಂಡರೂ ಕೂಡ ಸ್ವಂತಿಕೆ ಸೃಜನಶೀಲತೆ ಮುಖ್ಯವಾಗಬೇಕು ಎಂದು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಅಭಿಪ್ರಾಯಪಟ್ಟರು.
ಅವರು ಗಂಗೊಳ್ಳಿಯ ಶ್ರೀ ಸಂಪಿಗೆ ಜಟ್ಟಿಗೇಶ್ವರ ದೇವಸ್ಥಾನದ ವಠಾರದಲ್ಲಿ ಗಂಗೊಳ್ಳಿ ಸಮುದಾಯ ಹಿತರಕ್ಷಣಾ ಸಮಿತಿ (ರಿ.) ವತಿಯಿಂದ ಭಾರತದ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ದೇಶಪ್ರೇಮ ಎಂದರೇನು? ವಿಷಯದ ಕುರಿತಾಗಿನ ಪ್ರಬಂಧ ಸ್ಪರ್ಧೆಯ ಫಲಿತಾಂಶ ಘೋಷಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳಲ್ಲಿ ಬರವಣಿಗೆಯ ಕಲೆಯನ್ನು ಉದ್ದೀಪನಗೊಳಿಸುವಲ್ಲಿ ಇಂತಹ ಸ್ಪರ್ಧೆಗಳು ಪ್ರಮುಖ ಪಾತ್ರವಹಿಸುತ್ತವೆ. ಇಂತಹ ಸ್ಪರ್ಧೆಗಳಲ್ಲಿನ ಸಕ್ರಿಯ ಭಾಗವಹಿಸುವಿಕೆ ಮಕ್ಕಳನ್ನು ಕ್ರಿಯಾಶೀಲರನ್ನಾಗಿರಿಸಲು ಪ್ರೇರಣೆ ನೀಡುತ್ತದೆ ಎಂದು ಅವರು ಹೇಳಿದರು.
ಗಂಗೊಳ್ಳಿ ಸಮುದಾಯ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಭಾಸ್ಕರ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಗುರುರಾಜ ದೇವಾಡಿಗ, ಸದಸ್ಯರಾದ ವೆಂಕಟೇಶ್ ಖಾರ್ವಿ, ಸತೀಶ್ ಖಾರ್ವಿ, ನಿಶಾಂತ್ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು. ರಾಘವೇಂದ್ರ ದೇವಾಡಿಗ ಸ್ವಾಗತಿಸಿ ವಂದಿಸಿದರು.
ಪ್ರಬಂಧ ಸ್ಪರ್ಧೆಯಲ್ಲಿ ಮಂಗಳೂರಿನ ಡೊಂಗರಕೇರಿಯ ಕೆನರಾ ಪ್ರೌಢ ಶಾಲೆಯ ವಿದ್ಯಾರ್ಥಿನಿ ಸಿಂಚನ ಪ್ರಥಮ ಸ್ಥಾನ ಪಡೆದರೆ, ಉಪ್ಪುಂದ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ಪವಿತ್ರ ಎನ್ ದೇವಾಡಿಗ ದ್ವಿತೀಯ ಸ್ಥಾನ ಮತ್ತು ಕೋಟ ವಿವೇಕ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಆದಿತ್ಯ ಹೆಗ್ಡೆ ತೃತೀಯ ಸ್ಥಾನ ಪಡೆದರು. ಯೂಟ್ಯೂಬ್ ಮೂಲಕ ಈ ಕಾರ್ಯಕ್ರಮದ ನೇರ ಪ್ರಸಾರವನ್ನು ನಡೆಸಲಾಯಿತು. ಭಾಗವಹಿಸಿದ ಎಲ್ಲರಿಗೂ ಕೂಡ ಡಿಜಿಟಲ್ ಸರ್ಟಿಫಿಕೇಟ್ ಗಳನ್ನು ವಿತರಿಸಲಾಯಿತು.