Monday, January 20, 2025
Monday, January 20, 2025

ಎರಡು ವಾರದಲ್ಲಿ ಜಿಲ್ಲೆಯ ಪಾಸಿಟಿವ್ ಪ್ರಮಾಣ ಶೇ.1ಕ್ಕಿಂತ ಕಡಿಮೆ ಮಾಡುವ ಗುರಿ: ಜಿಲ್ಲಾಧಿಕಾರಿ

ಎರಡು ವಾರದಲ್ಲಿ ಜಿಲ್ಲೆಯ ಪಾಸಿಟಿವ್ ಪ್ರಮಾಣ ಶೇ.1ಕ್ಕಿಂತ ಕಡಿಮೆ ಮಾಡುವ ಗುರಿ: ಜಿಲ್ಲಾಧಿಕಾರಿ

Date:

ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣವನ್ನು ಎರಡು ವಾರಗಳ ಒಳಗೆ ಶೇ.1 ಕ್ಕಿಂತ ಕಡಿಮೆಗೊಳಿಸುವ ನಿಟ್ಟಿನಲ್ಲಿ, ನಿಯಂತ್ರಣಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ, ಜಿಲ್ಲೆಯಲ್ಲಿ ಈಗಾಗಲೇ ಕೋವಿಡ್ ನಿಯಂತ್ರಣಕ್ಕಾಗಿ ರಚಿಸಲಾಗಿರುವ ವಿವಿಧ ಕಾರ್ಯಪಡೆ ತಂಡಗಳ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ ಸೂಚಿಸಿದರು.

ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಕೋವಿಡ್ ನಿಯಂತ್ರಣಾ ಕ್ರಮಗಳ ಅನುಷ್ಠಾನಕ್ಕೆ ರಚಿಸಿರುವ ವಿವಿಧ ಅಧಿಕಾರಿಗಳ ತಂಡದ ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೋವಿಡ್‌ನಿಂದ ಅಪಾಯವಿಲ್ಲ, ಇದರ ಹರಡುವಿಕೆ ಕಡಿಮೆಯಾಗಿದೆ ಎಂಬ ಭಾವನೆ ಸಾರ್ವಜನಿಕರಲ್ಲಿ ಕಂಡುಬರುತ್ತಿದೆ. ಸಭೆ ಸಮಾರಂಭಗಳಲ್ಲಿ ಸಾಮಾಜಿಕ ಅಂತರ ಪಾಲನೆಯಾಗದಿರುವುದು ಹಾಗೂ ಮಾಸ್ಕ್ ಧರಿಸದೇ ಇರುವುದು ಎಲ್ಲೆಡೆ ಕಂಡುಬರುತ್ತಿದೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸಬೇಕು. ಮಾಸ್ಕ್ ಧರಿಸದೇ ಇರುವುದು, ಸಾಮಾಜಿಕ ಅಂತರ ಪಾಲನೆಯಾಗದ ಸ್ಥಳಗಳಲ್ಲಿ, ಸಂಬಂಧಪಟ್ಟವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ದಂಡವನ್ನು ವಿಧಿಸಿ.

ಜಿಲ್ಲೆಯಾದ್ಯಂತ ಏಕಕಾಲದಲ್ಲಿ ನಗರಸಭೆ, ಪುರಸಭೆ, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಾಸ್ಕ್ ಜಾಗೃತಿ ಮೂಡಿಸಲು ಅಭಿಯಾನ ಆಯೋಜಿಸಿ, ದಂಡ ವಿಧಿಸಿ, ಜಿಲ್ಲೆಯಲ್ಲಿ ಕೋವಿಡ್ ಶೂನ್ಯ ಪ್ರಕರಣಗಳು ಬರುವವರೆಗೂ ಎಲ್ಲಾ ಅಧಿಕಾರಿಗಳು ತಮಗೆ ವಹಿಸಲಾಗಿರುವ ಜವಾಬ್ದಾರಿಗಳನ್ನು ಯಾವುದೇ ಲೋಪಗಳಿಗೆ ಆಸ್ಪದವಾಗದಂತೆ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಲಸಿಕೆ ನೀಡಿಕೆ ಕಾರ್ಯಕ್ರಮ ಉತ್ತಮವಾಗಿದ್ದು, ಈಗಾಗಲೇ ಒಟ್ಟು 79% ಲಸಿಕೆ ನೀಡಿದ್ದು, ಲಸಿಕಾ ಕಾರ್ಯಕ್ರಮಕ್ಕೆ ಇನ್ನಷ್ಟು ವೇಗ ನೀಡಿ ಜಿಲ್ಲೆಯಲ್ಲಿ 100% ಗುರಿ ಸಾಧಿಸಬೇಕು. ಜನಪ್ರತಿನಿಧಿಗಳು ಮತ್ತು ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳ ಸಹಕಾರ ಪಡೆದು, ಲಸಿಕಾ ಮಹಾಮೇಳ ಕಾರ್ಯಕ್ರಮದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಲಸಿಕೆ ನೀಡಲು ಕ್ರಮ ಕೈಗೊಳ್ಳಿ. ಪುರಸಭೆ ಮತ್ತು ನಗರಸಭೆ ವ್ಯಾಪ್ತಿಗಳಲ್ಲಿ ವಾರ್ಡ್ ಟಾಸ್ಕ್ ಫೋರ್ಸ್ ಮೂಲಕ ಸಾರ್ವಜನಿಕರಿಗೆ ಲಸಿಕೆ ವಿತರಿಸಿ, 100ಕ್ಕಿಂತ ಹೆಚ್ಚು ಅಸಂಘಟಿತ ವಲಯದ ಕಾರ್ಮಿಕರಿಗೆ ಅವರು ಕೆಲಸ ನಿರ್ವಹಿಸುವ ಸ್ಥಳದಲ್ಲಿಯೇ ಶಿಬಿರ ಆಯೋಜಿಸಿ ಲಸಿಕೆ ನೀಡಿ, ಮೀನುಗಾರರಿಗೆ ವಿಶೇಷ ಅಭಿಯಾನದ ಮೂಲಕ ಲಸಿಕೆ ನೀಡಬೇಕು ಎಂದರು.

ಕೋವಿಡ್ ನಿಯಂತ್ರಣಾ ಉದ್ದೇಶದಿಂದ ವಿವಿಧ ದಾನಿಗಳು ಜಿಲ್ಲಾಡಳಿತಕ್ಕೆ ನೀಡಿರುವ ಅಂಬುಲೆನ್ಸ್ ವಾಹನಗಳಿಗೆ ಸಂಬಂಧಪಟ್ಟ ದಾಖಲೆ ಪತ್ರಗಳಿಗೆ ಶೀಘ್ರದಲ್ಲಿ ಅನುಮತಿಯನ್ನು ನೀಡಿ, ವಾಹನಗಳು ಸಾರ್ವಜನಿಕರ ಸೇವೆಗೆ ಲಭ್ಯವಾಗುವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಗೆ ಕೇರಳ ಮತ್ತು ಮಹಾರಾಷ್ಟ್ರದಿಂದ ಆಗಮಿಸುವವರು 72 ಗಂಟೆಗಳ ಒಳಗೆ ಮಾಡಿಸಿರುವ ಕೋವಿಡ್ ನೆಗೆಟಿವ್ ವರದಿ ಹೊಂದಿರುವ ಬಗ್ಗೆ ಪರಿಶೀಲಿಸಿ. ಕೇರಳದಿಂದ ಬರುವವರನ್ನು 7 ದಿನಗಳ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಬೇಕು.

ಕೊಲ್ಲೂರು ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕೇರಳದಿಂದ ಪ್ರವಾಸಿಗರು ಆಗಮಿಸಲಿದ್ದು, ಅಲ್ಲಿ ಪ್ರತ್ಯೇಕ ಕೋವಿಡ್ ತಪಾಸಣಾ ಕೇಂದ್ರ ಆರಂಭಿಸಿ ಪರಿಶೀಲನೆ ನಡೆಸಬೇಕು ಮತ್ತು ಅಗತ್ಯ ಬಿದ್ದಲ್ಲಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲು ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್ ತೆರೆಯಿರಿ. ಕೊಲ್ಲೂರು ಪ್ರವೇಶದ್ವಾರದಲ್ಲಿ ಮತ್ತು ದೇವಸ್ಥಾನದ ವೆಬ್‌ಸೈಟ್‌ನಲ್ಲಿ ಕನ್ನಡ, ಮಲೆಯಾಳಂ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಕೇರಳದಿಂದ ಬರುವವರಿಗೆ ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ವರದಿ ಹೊಂದಿರುವ ಬಗ್ಗೆ ಮತ್ತು ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯಗೊಳಿಸಿರುವ ಬಗ್ಗೆ ಮಾಹಿತಿಯನ್ನು ಅಳವಡಿಸಿ ಎಂದರು.

ಜಿಲ್ಲೆಯಲ್ಲಿ ಪ್ರತಿದಿನ ಸರಾಸರಿ 9000 ಕ್ಕೂ ಅಧಿಕ ಕೋವಿಡ್ ಪರೀಕ್ಷೆ ನಡೆಯುತ್ತಿದ್ದು, ಇದನ್ನು ಇನ್ನಷ್ಟು ಹೆಚ್ಚು ಮಾಡಬೇಕು. ಪಾಸಿಟಿವ್ ಬಂದ ವ್ಯಕ್ತಿಗಳನ್ನು ಕೋವಿಡ್ ಕೇರ್ ಸೆಂಟರ್ ಗೆ ವರ್ಗಾಯಿಸುವ ಪ್ರಮಾಣವನ್ನು ಹೆಚ್ಚು ಮಾಡಬೇಕು. ಈ ಕಾರ್ಯಕ್ಕೆ ಅಗತ್ಯವಿದ್ದಲ್ಲಿ ಪೊಲೀಸ್ ಸಹಕಾರ ಪಡೆಯುವಂತೆ ತಿಳಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ. ನವೀನ್ ಭಟ್ ಕಂಟೋನ್ಮೆಂಟ್ ಜೋನ್‌ಗಳನ್ನು ರಚಿಸುವಂತೆ ಹೇಳಿದರು.

ಸಭೆಯಲ್ಲಿ ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಹಾಗೂ ಕೋವಿಡ್ ನಿಯಂತ್ರಣ ಕ್ರಮಗಳ ಅನುಷ್ಠಾನ ಕುರಿತು ರಚಿಸಿರುವ ವಿವಿಧ ಅಧಿಕಾರಿಗಳ ತಂಡದ ಮುಖ್ಯಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!