ಮಣಿಪಾಲ: ಪರಿಸರ ತತ್ತ್ವಗಳ ಪ್ರಕಾರ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವುದು ನಾವು ಎದುರಿಸುತ್ತಿರುವ ಪರಿಸರ ಬಿಕ್ಕಟ್ಟನ್ನು ತಡೆಯಲು ಉಳಿದಿರುವ ಏಕೈಕ ಆಯ್ಕೆಯಾಗಿದೆ ಎಂದು ಕಡಿಕೆ ಟ್ರಸ್ಟ್, ಕಾರ್ಕಳದ ಅಧ್ಯಕ್ಷೆ ಮಮತಾ ರೈ ಹೇಳಿದರು.
ಮಾಹೆಯ ಗಾಂಧಿಯ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈಯನ್ಸಸ್ ವಿದ್ಯಾರ್ಥಿಗಳು ಆಯೋಜಿಸಿದ್ದ ಇಕೋಸ್ಪಾಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುಸ್ಥಿರ ಜೀವನಶೈಲಿಯ ಕುರಿತು ಮಾತನಾಡಿದ ಅವರು, ಸುಸ್ಥಿರ ಜೀವನದ ಹಲವಾರು ಉದಾಹರಣೆಗಳನ್ನು ನೀಡಿ, ಈ ಮೂಲಕ ನಾವು ಒಟ್ಟಾಗಿ ಇಂಗಾಲದ ಹೆಜ್ಜೆ ಗುರುತನ್ನು ಇಳಿಸಲು ಸಾಧ್ಯ ಎಂದರು.
ನಾವು ಬಳಸುವ ವಸ್ತುಗಳ ಮೇಲೆಯೇ ಉತ್ಪಾದನೆ ಅವಲಂಭಿತವಾಗಿರುವುದರಿಂದ, ಜನರು ತಮ್ಮ ಜೀವನವನ್ನು ಪರಿಸರಮಯವಾಗಿಸಿದಾಗ, ಉತ್ಪಾದಕರೂ ಕೂಡ ತಮ್ಮ ನಿಲುವನ್ನು ಬದಲಾಯಿಸ ಬೇಕಾಗುತ್ತದೆ ಎಂದು ಅವರು ಹೇಳಿದರು.
ಗಾಂಧಿಯ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈಯನ್ಸಸ್ ನ ನಿರ್ದೇಶಕರಾದ ಪ್ರೊ ವರದೇಶ್ ಹಿರೇಗಂಗೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ಪರ್ಧಾ ಮನೋಭಾವದ ಬದಲಾಗಿ ಸಹಕಾರ ಮನೋಭಾವವೇ ಮೌಲ್ಯವಾದಾಗ ಮಾನವಕುಲದ ಸರ್ವೋದಯ ಸಾಧ್ಯ; ನಾವು ನಡೆಸುವ ಬದುಕಿಗೂ ಮತ್ತು ಹವಾಮಾನ ವೈಪರೀತ್ಯಕ್ಕೂ ನೇರವಾದ ಸಂಬಂಧವಿದೆ.
ಮಮತಾ ರೈ ಅವರ ಅವಿರತ ಕೆಲಸವು ಉಡುಪಿ ಸೀರೆ ನೇಯ್ಗೆಯನ್ನು ಅಳಿವಿನ ಹಂತದಿಂದ ಪುನರುಜ್ಜೀವನದ ಹಾದಿಗೆ ತಿರುಗಿಸಿದೆ. ಪ್ರಸ್ತುತ ಉಡುಪಿ ಸೀರೆ ನೇಕಾರರ ಸಂಖ್ಯೆ ತಾಳಿಪಾಡಿ ನೇಕಾರರ ಸೊಸೈಟಿಯಲ್ಲಿ 8 ರಿಂದ 34 (ಅವಿಭಜಿತ ಜಿಲ್ಲೆಗಳಲ್ಲಿ 42 ರಿಂದ 74) ಕ್ಕೆ ಹೆಚ್ಚಾಗಿದೆ.
ಅವರ ಪ್ರಯತ್ನದಿಂದಾಗಿ ಎರಡು ದಶಕಗಳ ನಂತರ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಯುವಕರು ನೇಕಾರಿಕೆಯನ್ನು ಕೈಗೆತ್ತಿಗೊಳ್ಳುತ್ತಿದ್ದಾರೆ. ಸರಳ ಮತ್ತು ಪರಿಸರ ಪ್ರಜ್ಞೆಯ ಜೀವನ, ತೋಟಗಾರಿಕೆ, ಮನೆ ಅಡುಗೆ ಮತ್ತು ಕೈಮಗ್ಗ ಮತ್ತು ಕೈಯಿಂದ ಮಾಡಿದ ವಸ್ತುಗಳನ್ನು ಧರಿಸಲು ಮಮತಾ ರೈ ಅನೇಕರಿಗೆ ಸ್ಫೂರ್ತಿ ನೀಡಿದ್ದಾರೆ ಎಂದರು.
ಪ್ರಿಯಾ ಗಾರ್ಗ್ ಸ್ವಾಗತಿಸಿ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ವೆಲಿಕಾ ವಂದಿಸಿದರು. ಆಕರ್ಷಿಕಾ ಸಿಂಗ್ ಕಾರ್ಯಕ್ರಮವನ್ನು ನಿರೂಪಿಸಿದರು.
ಮನಸ್ವಿನಿ ಶ್ರೀರಂಗಂ ಇಕೋಸ್ಪಾಟ್ ನ ಕುರಿತು ಮಾತನಾಡಿದರು. ಬಿಎ- ಎಸ್ಥೆಟಿಕ್ಸ್ ಅಂಡ್ ಪೀಸ್ ಸ್ಟಡೀಸ್ ನಡೆಸುತ್ತಿರುವ ಇಕೋಸ್ಪಾಟ್ ನ ಭಾಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಇಕೋಸ್ಪಾಟ್ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನ ವಿದ್ಯಾರ್ಥಿಗಳು ಸುಸ್ಥಿರ ಜೀವನ ಕ್ರಮದ ಕುರಿತು ನಡೆಸುತ್ತಿರುವ ಕಾರ್ಯಕ್ರಮವಾಗಿದೆ. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಯಾನವನ್ನು ಜನರಿಗೆ ತಲುಪಿಸಲು ಮತ್ತು ಸುಸ್ಥಿರ ಜೀವನಶೈಲಿಯ ಬಗ್ಗೆ ಜಾಗೃತಿ ಮೂಡಿಸಲು ಇದನ್ನು ಸಂಘಟಿಸುತ್ತಿದ್ದಾರೆ.