ಕಾಪು, ಜು.9: ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪು ಶ್ರೀ ಹೊಸಮಾರಿಗುಡಿ ದೈವಸ್ಥಾನಕ್ಕೆ ಮಂಗಳವಾರ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಸೂರ್ಯಕುಮಾರ್ ಯಾದವ್ ಪತ್ನಿ ದೇವಿಶಾ ಶೆಟ್ಟಿ ಜತೆಗೆ ಭೇಟಿ ನೀಡಿದರು. ತಮ್ಮ ವೈವಾಹಿಕ ಜೀವನದ ವರ್ಷಾಚರಣೆಯ ಪ್ರಯುಕ್ತ ದೇವಳಕ್ಕೆ ಸೇವಾರೂಪದಲ್ಲಿ ಸ್ತಂಬವನ್ನು ನೀಡಿದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ವಾಸುದೇವ ಶೆಟ್ಟಿ, ಗೀತಾಂಜಲಿ ಸುವರ್ಣ ಮುಂತಾದವರು ಉಪಸ್ಥಿತರಿದ್ದರು. ದೇವಳದ ವತಿಯಿಂದ ಸೂರ್ಯಕುಮಾರ್ ಯಾದವ್ ದಂಪತಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಸೂರ್ಯಕುಮಾರ್ ಯಾದವ್ ಅವರ ಕಾಪು ಭೇಟಿ ಸುದ್ದಿ ತಿಳಿದು ನೂರಾರು ಅಭಿಮಾನಿಗಳು ಸೇರಿದರು. ಸೂರ್ಯ ಎಲ್ಲರಿಗೂ ಆಟೋಗ್ರಾಫ್ ಮತ್ತು ಸೆಲ್ಫಿಗೆ ಪೋಸ್ ನೀಡಿ ಕೈ ಬೀಸಿ ತೆರಳಿದರು.