ಕೋವಿಡ್-19 ರ ಲಾಕ್‌ಡೌನ್ ಕಾರಣ ಸಂಕಷ್ಟಕ್ಕೊಳಗಾದ 11 ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ರೂ.2000 ಗಳ ಒಂದು ಬಾರಿಯ ನೆರವು ನೀಡಲಾಗುತ್ತಿದ್ದು, ಯೋಜನೆಯ ಕುರಿತು ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸುವ ಬಗ್ಗೆ ಮಾರ್ಗದರ್ಶನ ಹಾಗೂ ಅರ್ಜಿ ಸಲ್ಲಿಸಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಸೇವಾ ಕೇಂದ್ರಗಳು /ವಾರ್ಡ್ ಮಟ್ಟದ ಸೇವಾ ಕೇಂದ್ರಗಳು/ಸಾಮಾನ್ಯ ಸೇವಾ ಕೇಂದ್ರಗಳು, ಕಾರ್ಮಿಕ ಸೇವಾ ಕೇಂದ್ರಗಳನ್ನು ಅಥವಾ ಕಾರ್ಮಿಕ ನಿರೀಕ್ಷಕರು/ಕಾರ್ಮಿಕ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಬಹುದಾಗಿರುತ್ತದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
11 ವರ್ಗಗಳ ಅಸಂಘಟಿತ ಕಾರ್ಮಿಕರಾದ ಅಗಸರು, ಕ್ಷೌರಿಕರು, ಗೃಹ ಕಾರ್ಮಿಕರು, ಟೈಲರ್‌ಗಳು, ಮೆಕ್ಯಾನಿಕ್, ಚಿಂದಿ ಆಯುವವರು, ಹಮಾಲರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು ಹಾಗೂ ಭಟ್ಟಿ ಕಾರ್ಮಿಕ ವೃತ್ತಿಯಲ್ಲಿ ತೊಡಗಿರುವ ಕಾರ್ಮಿಕರು, ರೂ.2,000 ಗಳ ಒಂದು ಬಾರಿಯ ನೆರವಿನ ವಿಶೇಷ ಪ್ಯಾಕೇಜ್ ಪಡೆಯಲು ಸದರಿ ವರ್ಗಗಳ 18-65 ವಯೋಮಾನದ, ಬಿ.ಪಿ.ಎಲ್ ಕುಟುಂಬದ, ಓರ್ವ ಫಲಾನುಭವಿಯು ಮಾತ್ರ ಅರ್ಹರಾಗಿದ್ದು, ಆಧಾರ್ ಸಂಖ್ಯೆ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಹೊಂದಿರಬೇಕಾಗಿದ್ದು, ನಿಗದಿತ ವೃತ್ತಿ ನಿರ್ವಹಿಸುತ್ತಿರುವ ಕುರಿತು ಅಧಿಕಾರಿಗಳಿಂದ ಪಡೆದ ಉದ್ಯೋಗ ದೃಢೀಕರಣ ಪ್ರಮಾಣಪತ್ರ ಹಾಗೂ ಇತ್ತೀಚಿನ ಭಾವಚಿತ್ರದೊಂದಿಗೆ https://sevasindhu.karnataka.gov.in ಪೋರ್ಟಲ್ ನಲ್ಲಿ ಜುಲೈ 31 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.