ಕೋವಿಡ್ ಸೋಂಕಿತರು ಬೇಗ ಗುಣಮುಖರಾಗಲು ಅವರಲ್ಲಿನ ರೋಗನಿರೋಧಕ ಶಕ್ತಿ ಅಧಿವಾಗುವುದು ಅತೀ ಮುಖ್ಯ. ಈ ನಿಟ್ಟಿನಲ್ಲಿ ಅವರು ಔಷಧಗಳ ಸೇವನೆ ಜೊತೆಗೆ ಪೋಷಕಾಂಶ ಭರಿತ ಹಾಗೂ ಸತ್ವ ಭರಿತ ಆಹಾರ ಸೇವನೆ ಮಾಡುವುದು ಅತೀ ಅಗತ್ಯ. ಸೋಂಕಿತರು ಹೋಂ ಐಸೋಲೇಶನ್ ನಲ್ಲಿದ್ದರೆ ಕುಟುಂಬದವರು ಕಾಲಕಾಲಕ್ಕೆ ಆಹಾರ ನೀಡಬಹುದು ಆದರೆ ಕೋವಿಡ್ ಕೇರ್ ಸೆಂಟರ್ ಗೆ ದಾಖಲಾದರೆ ಇದೆಲ್ಲಾ ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರವಾಗಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಮಿಯಾರು ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ವಿಜ್ಞಾನ ಕಾಲೇಜು ನಲ್ಲಿ ಜಿಲ್ಲಾಡಳಿತ ಆರಂಭಿಸಿರುವ ಕೋವಿಡ್ ಕೇರ್ ಸೆಂಟರ್ ಪ್ರತ್ಯಕ್ಷ ಸಾಕ್ಷಿಯಾಗಿದೆ.
ಈ ಕೋವಿಡ್ ಆರೈಕೆ ಕೇಂದ್ರದಲ್ಲಿ ದಾಖಲಾಗಿರುವ ಸೋಂಕಿತರಿಗೆ ಕಾಲಕಾಲಕ್ಕೆ ಸರಿಯಾಗಿ ಅತ್ಯಂತ ಶುದ್ದ ಹಾಗೂ ಪೌಷ್ಠಿಕಾಂಶಯುಕ್ತ ಆಹಾವನ್ನು ನೀಡಲಾಗುತ್ತಿದ್ದು, ಬೆಳಗಿನ ಉಪಹಾರಕ್ಕೆ ಇಡ್ಲಿ ಸಾಂಬಾರು, ಬಿಸಿಬೇಳೆ ಬಾತ್, ಪಲಾವ್ ಸಲಾಡ್, ಉಪ್ಪಿಟ್ಟು ಅವಲಕ್ಕಿ, ಚಿತ್ರಾನ್ನ/ಪುಳಿಯೊಗರೆ, ಸೆಟ್ ದೋಸೆ, ಸಾಗು ಮುಂತಾದ ವೈವಿಧ್ಯಮಯ ತಿಂಡಿಯನ್ನು ಪ್ರತೀ ದಿನ ಮೆನು ಸಿದ್ದಪಡಿಸಿ ಅದರಂತೆ ನೀಡಲಾಗುತ್ತಿದೆ. ಜೊತೆಯಲ್ಲಿ ಚಹಾ ಮತ್ತು ಕಷಾಯವನ್ನೂ ನೀಡಲಾಗುತ್ತಿದೆ.
ಮಧ್ಯಾಹ್ನದ ಊಟಕ್ಕೆ ಚಪಾತಿ, ಅನ್ನ, ಪಲ್ಯ, ಮೊಟ್ಟೆ, ಸಾಂಬಾರು, ಮೊಸರು, ಉಪ್ಪಿನಕಾಯಿ ನೀಡಲಾಗುತ್ತಿದ್ದು, ಮಧ್ಯಾಹ್ನ ಊಟಕ್ಕೆ ಕುಚ್ಚಿಗೆ ಅನ್ನ ಹಾಗೂ ರಾತ್ರಿ ಊಟಕ್ಕೆ ಬೆಳ್ತಿಗೆ ಅನ್ನ ನೀಡಲಾಗುತ್ತಿದೆ. ಅಲ್ಲದೆ ಪ್ರತೀದಿನ ಸಂಜೆ ಅವಲಕ್ಕಿ ಒಗ್ಗರಣೆ, ಶ್ಯಾವಿಗೆ, ರವೆ ಉಪ್ಪಿಟ್ಟು, ಮಾಲ್ಟ್, ಪ್ರೂಟ್ ಸಲಾಡ್ ಸಹ ವಿತರಿಸುವ ಮೂಲಕ ಕೋವಿಡ್ ಸೋಂಕಿತರ ಆರೋಗ್ಯ ಶೀಘ್ರದಲ್ಲಿ ಸುಧಾರಣೆಯಾಗುವಂತೆ ಮಾಡಲಾಗುತ್ತಿದೆ.
ಪ್ರಸ್ತುತ ಇಂದು ಬೆಳಗ್ಗೆ ಈ ಆರೈಕೆ ಕೇಂದ್ರದಲ್ಲಿ 19 ಮಂದಿ ಸೋಂಕಿತರಿದ್ದು ಈ ಮೊದಲು ಗರಿಷ್ಠ 49 ಮಂದಿ ಇದ್ದರು. ಪ್ರತೀದಿನ ಗುಣಮುಖರಾಗುವರು ಮತ್ತು ಸೇರ್ಪಡೆಯಾಗುವವವರು ಇದ್ದಾರೆ, ಅಡುಗೆ ಮಾಡಲು ಬಿಸಿಎಂ ಹಾಸ್ಟೆಲ್ ನ 5 ಮಂದಿ ಅಡಿಗೆ ಸಿಬ್ಬಂದಿ ಹಾಗೂ ಮೊರಾರ್ಜಿ ದೇಸಾಯಿ ಹಾಸ್ಟೆಲ್ ನ 6 ಸಿಬ್ಬಂದಿಗಳು 2 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಸಮಯಕ್ಕೆ ಸರಿಯಾಗಿ ಊಟೋಪಚಾರಕ್ಕೆ ಯಾವುದೇ ಅಡಚಣೆಯಾಗದಂತೆ ಕಾರ್ಯನಿರ್ವಹಿಸುತ್ತಿದ್ದಾರೆ.
ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಸೋಂಕಿತರನ್ನು ಹೋಂ ಐಸೋಲೇಶನ್ ಗೆ ಒಳಪಡಿಸಲಾಗುತ್ತಿತ್ತು ಆದರೆ ಬಹುತೇಕ ಮನೆಗಳಲ್ಲಿ ಸೋಂಕಿತರಿಗೆ ಪ್ರತ್ಯೇಕ ಕೊಠಡಿ, ಶೌಚಾಲಯಗಳ ಸಮಸ್ಯೆ ಇರುವ ಕಾರಣ ಅಂತಹವರಿಗಾಗಿ ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆದು, ಅಲ್ಲಿಯೇ ಅಗತ್ಯ ವೈದ್ಯಕೀಯ ಚಿಕಿತ್ಸೆ ಹಾಗೂ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ.
ಈ ಕೇಂದ್ರದಲ್ಲಿ 6 ಜನ ಶುಶ್ರೂಷಕರು ಸರದಿ ಪಾಳಿಯಲ್ಲಿ ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಿದ್ದು, ಪ್ರತೀದಿನ ವೈದ್ಯರು ಅಗಮಿಸಿ ಎಲ್ಲರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ, ಜಿಲ್ಲಾಡಳಿತದ ಮೂಲಕ ದಿನಸಿ ಸಾಮಗ್ರಿಗಳು ಸರಬರಾಜಾಗುತ್ತಿದ್ದು, ಇಲ್ಲಿಯೇ ಆಹಾರವನ್ನು ಸಿದ್ದಪಡಿಸಿ ನೀಡಲಾಗುತ್ತಿದ್ದು, ಶುಚಿತ್ವಕ್ಕೆ ಹೆಚ್ಚು ಆದ್ಯತೆ ನೀಡಿ ಆಹಾರ ತಯಾರಿಸುತ್ತಿದ್ದು, ಕೇಂದ್ರದಲ್ಲಿನ ಸೋಂಕಿತರಿಗೆ ಆರೈಕೆ ಕೇಂದ್ರದಲ್ಲಿ ತಯಾರಿಸಿದ ಆಹಾರ ಎನ್ನುವ ಭಾವನೆ ಬರದಂತೆ ತಮ್ಮ ಮನೆಯದೇ ಆಹಾರ ಎಂಬ ಭಾವನೆ ಮೂಡಿದ್ದು ಎಲ್ಲರೂ ಇಲ್ಲಿನ ವ್ಯವಸ್ಥೆ ಬಗ್ಗೆ ಸಂತೃಷ್ಠರಾಗಿದ್ದಾರೆ ಎನ್ನುತ್ತಾರೆ ಕೇಂದ್ರದ ನೋಡೆಲ್ ಅಧಿಕಾರಿಯಾದ ಲೋಕೇಶ್.