ಕಾರ್ಕಳ: ಕಳೆದ 70 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಊಳಿಗಮಾನ್ಯ ಪದ್ಧತಿಯ ಕರಾಳ ಮುಷ್ಠಿಯಿಂದ ಹೊರಬಂದು ಸ್ವತಂತ್ರ ಬದುಕು ಕಟ್ಟಿಕೊಂಡ ಮಂದಿ ತಮಗರಿವಿಲ್ಲದಂತೆ ಇಂದು ಅದೇ ಊಳಿಗಮಾನ್ಯ ಪದ್ಧತಿಯ ಪ್ರತಿಪಾದಕರ ರಾಜಕೀಯ ದಾಳದ ವಸ್ತುವಾಗಿ ಪರಿವರ್ತನೆಯಾಗುತ್ತಿದ್ದಾರೆ. ಇದರ ವಿರುದ್ಧ ಅಹಿಂಸಾತ್ಮಕ ಹೋರಾಟದ ಮೌನಕ್ರಾಂತಿ ಗ್ರಾಮೀಣ ಮಟ್ಟದಿಂದಲೇ ಆರಂಭವಾಗಬೇಕಾದುದು ಇಂದಿನ ಆದ್ಯತೆಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರಪಾಲ್ ನಕ್ರೆ ಹೇಳಿದರು.
ಅವರು ನೀರೆ ಕಣಂಜಾರು ಗ್ರಾಮೀಣ ಕೃಷಿ ಘಟಕ ಅಧ್ಯಕ್ಷ ಅಂತೋಣಿ ಡಿ’ಸೋಜರವರ ಉಸ್ತುವಾರಿಯಲ್ಲಿ ಹಿರಿಯ ಕಾಂಗ್ರೆಸ್ ಕಾರ್ಯಕರ್ತ ವಿಜಯ್ ಡಿ’ಸಿಲ್ವ ದಂಪತಿಗಳ ಪುತ್ರಿ ವಿಹೋಲಾ ಡಿ’ಸಿಲ್ವಳ 10ನೇ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ಸ್ಥಳೀಯ ಕಾಂಗ್ರೆಸ್ ಗ್ರಾಮ ಸಮಿತಿ ಕಾರ್ಯಕರ್ತರ ವಿಶೇಷ ಸಮಾವೇಶದಲ್ಲಿ ಮಾತಾಡುತ್ತಿದ್ದರು.
ಹುಟ್ಟುಹಬ್ಬದ ದೀಪ ಬೆಳಗಿಸಿ ಮಾತಾಡಿದ ಡಿಸಿಸಿ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಆಡಳಿತಾರೂಢ ಬಿಜೆಪಿಯ ವ್ಯರ್ಥ ಆಮಿಷಗಳಿಗೆ ಬಲಿಯಾಗದೆ ಈ ಕ್ಷೇತ್ರದಲ್ಲಿ ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಜನಪ್ರತಿನಿಧಿಗಳ ಮರು ಹುಟ್ಟಿನ ಹಬ್ಬವನ್ನು ಆಚರಿಸುವಂತಾಗಬೇಕು ಎಂದರು.
ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಕ್ಷ ಸಂಘಟನೆಗೆ ಕರೆ ನೀಡಿದರು. ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಡಿ’ಸೋಜ, ವಾರ್ಡ್ ಸಮಿತಿ ಅಧ್ಯಕ್ಷ ಅಂಬ್ರೋಜ್ ಲೋಬೋ ಸಂದರ್ಭೋಚಿತವಾಗಿ ಮಾತಾಡಿದರು.
ಕೆಪಿಸಿಸಿ ಕಿಸಾನ್ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಉದಯ ವಿ ಶೆಟ್ಟಿ, ಹಿರಿಯ ಕಾಂಗ್ರೆಸ್ ಮುಂದಾಳು ಎರ್ಲಪಾಡಿ ಪಂಚಾಯತ್ ಮಾಜಿ ಅಧ್ಯಕ್ಷ ಭೋಜ ಶೆಟ್ಟಿ, ಧರ್ಮರಾಜ ಕುಮಾರ್, ಎಪಿಎಂಸಿ ಸದಸ್ಯ ಜಯರಾಮ ಆಚಾರ್ಯ, ಸ್ಥಳೀಯ ಗ್ರಾಮ ಸಮಿತಿ ಅಧ್ಯಕ್ಷ ಕಿಶೋರ್ ಮಡಿವಾಳ, ನೀರೆ ಗ್ರಾಮ ಪಂಚಾಯತ್ ಸದಸ್ಯೆ ಯಶೋಧ ಆಚಾರ್ಯ, ಬ್ಲಾಕ್ ಕಿಸಾನ್ ಘಟಕ ಉಪಾಧ್ಯಕ್ಷ ಆಂತೋಣಿ ಮಚಾದೋ, ಬ್ಲಾಕ್ ಐಟಿ ಸೆಲ್ ಅಧ್ಯಕ್ಷ ಸತೀಶ್ ಕಾರ್ಕಳ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಯುವ ನಾಯಕ ಪ್ರಕಾಶ್ ಮಾರ್ಟಿಸ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಬ್ಲಾಕ್ ಕಿಸಾನ್ ಘಟಕದ ಕಾರ್ಯದರ್ಶಿ ಸುಜಾತ ಶೆಟ್ಟಿ ವಂದನಾರ್ಪಣೆಗೈದರು.