ಉಡುಪಿ: ಬದ್ಧತೆಯಿಂದ ಕೂಡಿದ ನೌಕರವರ್ಗ ಮತ್ತು ಸಮರ್ಥ ಮುಂದಾಳತ್ವ ಇದ್ದಲ್ಲಿ ಯಾವುದೇ ಸಂಸ್ಥೆ ಅಭಿವೃದ್ಧಿಯ ಪಥದಲ್ಲಿ ಸಾಗಲು ಸಾಧ್ಯ. ಪ್ರಾಮಾಣಿಕ ಪ್ರಯತ್ನವೊಂದೇ ಯಶಸ್ಸಿಗೆ ಮೂಲ ಮಂತ್ರ ಎಂದು ಜಿಲ್ಲಾ ಶಿಕ್ಷಕ ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಅಶೋಕ್ ಕಾಮತ್ ರವರು ಅಭಿಪ್ರಾಯಪಟ್ಟರು.
ಅವರು ಪದೋನ್ನತಿಯೊಂದಿಗೆ ವರ್ಗಾವಣೆ ಹೊಂದಿದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ಮುಖ್ಯಸ್ಥ ವಿಶ್ವನಾಥ ಬಾಯರಿಯವರ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ಸ್ವಪ್ರತಿಷ್ಠೆ, ಸ್ವಹಿತಾಸಕ್ತಿ ಬದಿಗಿರಿಸಿ ದುಡಿಯುವ ನೌಕರವರ್ಗ ಸಂಸ್ಥೆಯ ಅಮೂಲ್ಯ ಆಸ್ತಿ. ಆ ನೌಕರರನ್ನು ಸಮರ್ಥವಾಗಿ ಮುನ್ನಡೆಸುವ ಯೋಗ್ಯ ಮುಂದಾಳು ಇದ್ದಲ್ಲಿ ಸಂಸ್ಥೆ ಮುನ್ನೆಲೆಗೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ. ವಿಶ್ವನಾಥ ಬಾಯರಿ ಯವರ ಮುಂದಾಳತ್ವದಿಂದ ಈ ಸಂಸ್ಥೆ ಇಷ್ಟು ಎತ್ತರಕ್ಕೆ ಏರಲು ಸಾಧ್ಯವಾಗಿದೆ ಎಂದು ಹೇಳಿದರು.
ಪದವಿ ಪೂರ್ವ ಕಾಲೇಜು ವಿಭಾಗದ ಪ್ರಭಾರ ಪ್ರಾಂಶುಪಾಲ ಯಾದವ ಕರ್ಕೇರ ಅಧ್ಯಕ್ಷತೆ ವಹಿಸಿದ್ದರು. ಎಸ್. ಡಿ.ಎಂ.ಸಿ ಉಪಾಧ್ಯಕ್ಷೆ ತಾರಾದೇವಿ, ಶಿಕ್ಷಣ ಸ್ಥಾಯಿ ಸಮಿತಿಯ ಶೇಖರ್ ಕೋಟ್ಯಾನ್, ದಾನಿ ನಿರುಪಮಾ ಪ್ರಸಾದ್ ಶೆಟ್ಟಿ, ಮಹಾಮಾಯಾ ಫೌಂಡೇಶನ್ ನ ಉಷಾ ಪೈ, ಎಸ್ ಡಿ ಎಂ ಸಿ ಸದಸ್ಯರು ಅತಿಥಿಗಳಾಗಿ ಭಾಗವಹಿಸಿ ಶುಭಾಶಯ ಕೋರಿದರು.
ವಿಶ್ವನಾಥ ಬಾಯರಿ ದಂಪತಿ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕ ಗಂಗಾಧರ್ ಸ್ವಾಗತಿಸಿ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ಉರಾಳ್ ವಂದಿಸಿದರು ಶಿಕ್ಷಕ ಶೇಖರ್ ಬೋವಿ ಕಾರ್ಯಕ್ರಮ ನಿರೂಪಿಸಿದರು.