ಕಾಪು: ಸಮಗ್ರ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವ ಪುಣ್ಯೋತ್ಸವದ ಸಡಗರದಲ್ಲಿರುವ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಭೇಟಿ ನೀಡಿ ದೇವರ ದರ್ಶನ ಪಡೆದರು.
ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಕರಾವಳಿ ಪ್ರದೇಶದ ಆರ್ಥಿಕ ಪ್ರಗತಿಯಲ್ಲಿ ಮೊಗವೀರ ಬಾಂಧವರ ಕೊಡುಗೆ ಅನನ್ಯವಾಗಿದೆ. ದೇವಳದ ಸಮಗ್ರ ಜೀರ್ಣೋದ್ಧಾರಗೊಂಡಿದ್ದು ಇದರಿಂದ ಸಮುದಾಯದ ಒಗ್ಗಟ್ಟು ಅನಾವರಣಗೊಂಡಿದೆ ಎಂದರು.
ಈ ಭಾಗದ ಜನರರಿಗಾಗಿ, ವಿಶೇಷವಾಗಿ ಮೊಗವೀರರಿಗಾಗಿ ಈ ವರ್ಷ 5000 ಮನೆಗಳನ್ನು ನಿರ್ಮಿಸಿಕೊಡಲಾಗುವುದು. ಬಂದರುಗಳಲ್ಲಿ ಹೂಳೆತ್ತುವುದು, ದೇವಾಲಯಕ್ಕೆ ದೇಣಿಗೆ, ಕೆರೆಗಳ ಅಭಿವೃದ್ಧಿ ಹಾಗೂ ಸುಮಾರು 1000 ವಿದ್ಯಾರ್ಥಿಗಳಿಗೆ ಸಾಕಾಗುವ ಹಾಸ್ಟೆಲ್ ಸಮುಚ್ಚಯ ನಿರ್ಮಾಣ ಮುಂತಾದ ಕ್ರಮಗಳನ್ನು ಮೊಗವೀರರ ಏಳಿಗೆಗಾಗಿ ಕೈಗೊಳ್ಳಲಾಗುವುದು.
ಮೀನುಗಾರರು ನೂತನ ತಂತ್ರಜ್ಞಾನವನ್ನು ಬಳಸಿ ಮೀನುಗಾರಿಕೆಯನ್ನು ಲಾಭದಾಯಕ ಮಾಡಿಕೊಳ್ಳಬೇಕು. ಈ ಬಾರಿಯ ಬಜೆಟ್ ನಲ್ಲಿ ಘೋಷಿಸಿದ ‘ಮತ್ಸ್ಯ ಸಿರಿ’ ಯೋಜನೆ ಅಡಿಯಲ್ಲಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಮೀನುಗಾರರಿಗೆ 100 ಹೈ ಸ್ಪೀಡ್ ಬೊಟ್ ಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೆರವಿನೊಂದಿಗೆ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
ಡಾ. ಜಿ. ಶಂಕರ್ ಅವರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಸಹಿತ ಸಮುದಾಯದ ಬೇಡಿಕೆಯಂತೆ ದೇವಳದ ಮುಂದುವರಿದ ಜೀರ್ಣೋದ್ಧಾರ ಕಾಮಗಾರಿಗೆ ಐದು ಕೋಟಿ ರೂಪಾಯಿ ಅನುದಾನ, ಸಮುದಾಯದ ಮಹಿಳೆಯರಿಗೆ ಶೂನ್ಯ ಬಡ್ಡಿ ಸಾಲ, ಡೀಸೆಲ್ ಸಬ್ಸಿಡಿ ಹೆಚ್ಚಳ, ವಿದ್ಯಾರ್ಥಿನಿಲಯ ಸ್ಥಾಪನೆ ಸೇರಿದಂತೆ ಮೊಗವೀರ ಸಮುದಾಯದ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಸಿಎಂ ಭರವಸೆ ನೀಡಿದರು.
ರಾಜ್ಯ ಸಚಿವರುಗಳಾದ ಶ್ರೀರಾಮುಲು, ಕೋಟ ಶ್ರೀನಿವಾಸ ಪೂಜಾರಿ, ವಿ. ಸುನೀಲ್ ಕುಮಾರ್, ಎಸ್. ಅಂಗಾರ, ಬ್ರಹ್ಮಕಲಶ ಪುಣ್ಯೋತ್ಸವ ಸಮಿತಿ ಅಧ್ಯಕ್ಷ ನಾಡೋಜ ಡಾ. ಜಿ. ಶಂಕರ್, ಶಾಸಕರುಗಳಾದ ಲಾಲಾಜಿ ಆರ್.ಮೆಂಡನ್, ಕೆ. ರಘುಪತಿ ಭಟ್, ಡಿ. ವೇದವ್ಯಾಸ ಕಾಮತ್, ಡಾ. ವೈ ಭರತ್ ಶೆಟ್ಟಿ, ಬಿ.ಎಂ. ಸುಕುಮಾರ ಶೆಟ್ಟಿ, ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಬಿಜೆಪಿ ಪ್ರಭಾರಿ ಕೆ. ಉದಯಕುಮಾರ್ ಶೆಟ್ಟಿ, ಬೆಣ್ಣೆಕುದ್ರು ದೇವಳದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಎ.ಸಿ. ಕುಂದರ್, ವಾಸುದೇವ ಸಾಲ್ಯಾನ್, ಜೀರ್ಣೋದ್ಧಾರ ಅಮಿತಿ ಅಧ್ಯಕ್ಷ ಗುಂಡು ಬಿ ಅಮೀನ್, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ. ಕೋಟ್ಯಾನ್, ಗೌರವ ಪ್ರಧಾನ ಕಾರ್ಯದರ್ಶಿ ಸುಧಾಕರ್ ಕುಂದರ್, ದಾಮೋದರ ಶರ್ಮಾ ಮುಂತಾದವರು ಉಪಸ್ಥಿತರಿದ್ದರು.