ಉಡುಪಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಏಪ್ರಿಲ್ 11 ರಂದು ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಈ ಕುರಿತು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅಧ್ಯಕ್ಷತೆಯಲ್ಲಿ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ಹಾಲ್‌ನಲ್ಲಿ ಪೂರ್ವಭಾವಿ ಸಭೆ ಇಂದು ನಡೆಯಿತು.
ಮುಖ್ಯಮಂತ್ರಿಗಳು ಏಪ್ರಿಲ್ 11 ರಂದು ಬೆಳಗ್ಗೆ 12 ಗಂಟೆಗೆ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಲಿದ್ದು, ಮಧ್ಯಾಹ್ನ 2.30 ಕ್ಕೆ ಉಡುಪಿಯಲ್ಲಿ ಡಾ. ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ಡಿಜಿಟಲ್ ಗ್ರಂಥಾಲಯ ಉದ್ಘಾಟಿಸಲಿದ್ದು, ಗ್ರಂಥಾಲಯದಲ್ಲಿ ಬನ್ನಂಜೆ ಗೋವಿಂದಾಚಾರ್ಯರ ಪ್ರತಿಮೆ ಅನಾವರಣ ಮಾಡಲಿದ್ದು, ಗ್ರಂಥಾಲಯಲ್ಲಿ ನಡೆಯುವ ಕಾರ್ಯಕ್ರಮದ ಬಗ್ಗೆ ನಿರ್ಮಿತಿ ಕೇಂದ್ರ ಮತ್ತು ಜಿಲ್ಲಾ ಗ್ರಂಥಾಲಯ ಅಧಿಕಾರಿಗಳು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಹೇಳಿದರು.
ನಂತರ 3.30 ಕ್ಕೆ ಬನ್ನಂಜೆಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಉದ್ಘಾಟಿಸಲಿದ್ದು, ನಂತರ ನಡೆಯುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಪಘಾತ ರಹಿತ ಬಸ್ ಚಾಲನೆ ಮಾಡಿದ ಚಾಲಕರಿಗೆ ಪ್ರಶಸ್ತಿ ವಿತರಣೆ ಮಾಡಲಿದ್ದು, ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಎಲ್ಲಾ ಸಿದ್ಧತೆ ಮಾಡಿಕೊಳ್ಳುವಂತೆ ಹೇಳಿದರು.
ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಸೂಕ್ತ ಪೊಲೀಸ್ ಭದ್ರತೆ ಒದಗಿಸುವಂತೆ ಪೊಲೀಸ್ ಇಲಾಖೆಗೆ ತಿಳಿಸಿದ ಜಿಲ್ಲಾಧಿಕಾರಿಗಳು, ಎಲ್ಲಾ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯಕ್ರಮದಲ್ಲಿ ಯಾವುದೇ ಲೋಪವಾಗದಂತೆ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ಸಭೆಯಲ್ಲಿ ಶಾಸಕ ಕೆ. ರಘುಪತಿ ಭಟ್, ಜಿಲ್ಲಾ ಪಂಚಾಯತ್ ಸಿಇಓ ಡಾ. ನವೀನ್ ಭಟ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ವೀಣಾ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳ ಪ್ರವಾಸ ವಿವರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಏಪ್ರಿಲ್ 11 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಅಂದು ಮಧ್ಯಾಹ್ನ 12 ಗಂಟೆಗೆ ಕಾಪು ತಾಲೂಕು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು. 3 ಗಂಟೆಗೆ ಬನ್ನಂಜೆಯಲ್ಲಿ ಡಾ. ಬನ್ನಂಜೆ ಗೋವಿಂದ ಆಚಾರ್ಯ ಸ್ಮಾರಕ ಡಿಜಿಟಲ್ ಗ್ರಂಥಾಲಯ ಉದ್ಘಾಟನೆ, 3.30 ಕ್ಕೆ ಬನ್ನಂಜೆಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಉದ್ಘಾಟನೆ ಮತ್ತು ಸಾರ್ವಜನಿಕ ಕಾರ್ಯಕ್ರಮ, ಸಂಜೆ 5.30 ಕ್ಕೆ ಕುಂಜಿಬೆಟ್ಟುವಿನಲ್ಲಿ ಸಗ್ರಿ ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ಮಣಿಪಾಲದಲ್ಲಿ ವಾಸ್ತವ್ಯ ಮಾಡಲಿರುವರು.